ರಾಯಚೂರು: ಅಕ್ಟೋಬರ್ 23ರಂದು ನಡೆಯಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಶಶೀಲ್ ನಮೋಶಿ ಅವರನ್ನು ಬೆಂಬಲಿಸುವಂತೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹಾಗೂ ರಾಯಚೂರು ನಗರ ಶಾಸಕ ಡಾ. ಎಸ್. ಶಿವರಾಜ ಪಾಟೀಲ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರಲ್ಲಿ ಮತಯಾಚಿಸಿದರು.
ನಗರದ ರೇಸ್ ಚಾಣಕ್ಯ ಶಾಲೆ, ವೇದಾಂತ ಕಾಲೇಜು, ರೇಸ್ ಕಾನ್ಸೆಪ್ಟ್ ಶಾಲೆ, ಕೊಂಡ ಸರಸ್ವತಮ್ಮ ಹನುಮಂತಯ್ಯ ಶಾಲೆ ಹಾಗೂ ವಿಜ್ಞಾನ ಶಾಲೆಗಳಿಗೆ ಭೇಟಿ ನೀಡಿದ ನಾಯಕರು, ಶಿಕ್ಷಕರೊಂದಿಗೆ ಸಂವಾದ ನಡೆಸಿ ಅವರ ಬೇಡಿಕೆಗಳನ್ನು ಆಲಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಶಶೀಲ್ ನಮೋಶಿ ಅವರು ವಿಧಾನ ಪರಿಷತ್ನಲ್ಲಿ ಹಲವು ಅವಧಿಗಳಿಂದ ಶಿಕ್ಷಕರ ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಧ್ವನಿ ಎತ್ತಿದ್ದಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಅವರಿಗೆ ನೇರ ಅನುಭವವಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ 371(ಜೆ) ಸೌಲಭ್ಯಗಳ ವಿಷಯದಲ್ಲಿಯೂ ಪರಿಷತ್ನಲ್ಲಿ ನಿರಂತರವಾಗಿ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ಶಿಕ್ಷಕರಿಗೆ ಕೌಶಲ್ಯ ತರಬೇತಿ, ಆರೋಗ್ಯ ಮತ್ತು ವಿಮಾ ಸೌಲಭ್ಯ, ಕನಿಷ್ಠ ವೇತನ ಹಾಗೂ ಪಿಂಚಣಿ ಸೇರಿದಂತೆ ಹಲವು ವಿಷಯಗಳಲ್ಲಿ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಶಶೀಲ್ ನಮೋಶಿ ಅವರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ಅನುದಾನ ವ್ಯಾಪ್ತಿಗೆ ತರಲಾಗಿತ್ತು ಎಂದು ಉಲ್ಲೇಖಿಸಿದ ಅವರು, ಪ್ರಸ್ತುತ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೂ ಸರ್ಕಾರ ಆದ್ಯತೆ ನೀಡಬೇಕು ಎಂದು ಹೇಳಿದರು.
ನಗರ ಶಾಸಕ ಡಾ. ಎಸ್. ಶಿವರಾಜ ಪಾಟೀಲ ಮಾತನಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ಆದ್ಯತೆಗಳ ಕುರಿತು ಟೀಕೆ ವ್ಯಕ್ತಪಡಿಸಿದರು. ಶಿಕ್ಷಕರ ನೇಮಕಾತಿ, ವೇತನ, ಆರೋಗ್ಯ ಭದ್ರತೆ ಹಾಗೂ ಸೇವಾ ಸೌಲಭ್ಯಗಳಂತಹ ವಿಷಯಗಳಿಗೆ ಸರ್ಕಾರ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ನಲ್ಲಿ ಶಿಕ್ಷಣ ಮತ್ತು ಶಿಕ್ಷಕರಿಗೆ ಸಂಬಂಧಿಸಿದ ವಿಷಯಗಳ ಕುರಿತು ಬಲವಾದ ಪ್ರತಿನಿಧಿತ್ವ ಅಗತ್ಯವಿದ್ದು, ಶಿಕ್ಷಕರು ಮತದಾನದ ವೇಳೆ ಎಚ್ಚರಿಕೆಯಿಂದ ತಮ್ಮ ಮತ ಚಲಾಯಿಸಬೇಕು. ಕಳೆದ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಅಸಿಂಧುವಾಗಿದ್ದ ಹಿನ್ನೆಲೆಯಲ್ಲಿ ಮತದಾನ ವಿಧಾನವನ್ನು ಸರಿಯಾಗಿ ಅನುಸರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕರು ಕನಿಷ್ಠ ವೇತನ, ಕೌಶಲ್ಯ ತರಬೇತಿ, ಆರೋಗ್ಯ ವಿಮೆ, ಸಾಲ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ನಾಯಕರ ಮುಂದಿಟ್ಟರು.
ರೇಸ್ ಚಾಣಕ್ಯ ಶಾಲೆಯ ಅಧ್ಯಕ್ಷೆ ಸಾವಿತ್ರಿ ಪುರುಷೋತ್ತಮ, ವೇದಾಂತ ಕಾಲೇಜಿನ ಅಧ್ಯಕ್ಷ ರಾಕೇಶ್ ರಾಜಲಬಂಡಿ, ರೇಸ್ ಕಾನ್ಸೆಪ್ಟ್ ಶಾಲೆಯ ಸಹ ಕಾರ್ಯದರ್ಶಿ ವಿಜ್ಞಾನ ವೆಂಕಟೇಶ್, ಚಂದ್ರಮೋಹನ್ ರೆಡ್ಡಿ, ಕೊಂಡ ಸರಸ್ವತಮ್ಮ ಹನುಮಂತಯ್ಯ ಶಾಲೆಯ ಕಾರ್ಯದರ್ಶಿ ಕೆ.ವಿ. ಮನೋಹರ, ಉಪಾಧ್ಯಕ್ಷ ಬಿ. ಜಗದೀಶ ಗುಪ್ತಾ ಹಾಗೂ ವಿಜ್ಞಾನ ಶಾಲೆಯ ಅಧ್ಯಕ್ಷ ವಿಜ್ಞಾನ ವೆಂಕಟೇಶ್ ತಮ್ಮ ತಮ್ಮ ಸಂಸ್ಥೆಗಳಲ್ಲಿ ಮತಯಾಚನೆ ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮಗಳಲ್ಲಿ ಬಿಜೆಪಿ ರಾಜ್ಯ ಸದಸ್ಯ ರಾಜಕುಮಾರ, ತ್ರಿವಿಕ್ರಮ ಜೋಶಿ, ಜಿಲ್ಲಾ ಉಪಾಧ್ಯಕ್ಷ ಬಿ. ಗೋವಿಂದ, ಟಿ. ಶ್ರೀನಿವಾಸ ರೆಡ್ಡಿ, ಮಂಡಲ ಅಧ್ಯಕ್ಷ ಊಟ್ಕೂರು ರಾಘವೇಂದ್ರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗಾಣಧಾಳ ಲಕ್ಷ್ಮೀಪತಿ, ಬಿಜೆಪಿ ಮುಖಂಡರಾದ ಕಡಗೋಲು ಆಂಜನೇಯ, ಡಾ. ನಾಗರಾಜ ಭಾಲ್ಕಿ, ನರಸಪ್ಪ ಯಕ್ಲಾಸಪೂರು, ಪಲುಗುಲ ನಾಗರಾಜ, ತಾಳಪಲ್ಲಿ ಶ್ರೀನಿವಾಸ, ಕೆ.ಇ. ವೀರ ಪ್ರಕಾಶ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.



