ರಾಯಚೂರು, ಅ.6: ನ್ಯಾಯಾಲಯದ ಕಲಾಪಗಳು ಹಾಗೂ ಕಕ್ಷಿದಾರರ ಪ್ರಕರಣಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ವಕೀಲರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ವೈಯಕ್ತಿಕ ಹಾಗೂ ಕುಟುಂಬದ ಹಿತದೃಷ್ಟಿಯಿಂದ ನಿಯಮಿತ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬಿ.ಬಿ. ಜಕಾತಿ ಹೇಳಿದರು.

ರಾಯಚೂರು ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನ್ಯಾಯವಾದಿಗಳ ಸಂಘದ ಆವರಣದಲ್ಲಿ ಆಯೋಜಿಸಿದ್ದ ವಕೀಲರ ಆರೋಗ್ಯ ತಪಾಸಣಾ ಶಿಬಿರವನ್ನು ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರ ವೃತ್ತಿಜೀವನ ಅತ್ಯಂತ ಒತ್ತಡದಿಂದ ಕೂಡಿದ್ದು, ದಿನನಿತ್ಯ ನ್ಯಾಯಾಲಯದ ಕಲಾಪ, ಪ್ರಕರಣಗಳ ಅಧ್ಯಯನ ಹಾಗೂ ಕಕ್ಷಿದಾರರ ಸಮಸ್ಯೆಗಳಿಗೆ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಈ ಕಾರಣದಿಂದ ತಮ್ಮ ಆರೋಗ್ಯದ ಕಡೆ ಗಮನ ಹರಿಸಲು ಸಾಧ್ಯವಾಗದ ಸಂದರ್ಭಗಳು ಹೆಚ್ಚಾಗುತ್ತವೆ. ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಲು ನಿಯಮಿತ ತಪಾಸಣೆ ಸಹಕಾರಿಯಾಗುತ್ತದೆ ಎಂದರು.

ನ್ಯಾಯವಾದಿಗಳ ಸಂಘವು ವಕೀಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಇಂತಹ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್. ಶಿವಶಂಕರ್ ಮಾತನಾಡಿ, ವಕೀಲರು ನ್ಯಾಯಾಲಯ ಹಾಗೂ ಕಚೇರಿ ಕೆಲಸಗಳಲ್ಲಿ ಸದಾ ಕಾರ್ಯನಿರತರಾಗಿರುವುದರಿಂದ ತಮ್ಮ ಆರೋಗ್ಯ ತಪಾಸಣೆಯನ್ನು ಮುಂದೂಡುವ ಪ್ರವೃತ್ತಿ ಕಂಡುಬರುತ್ತದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ವಕೀಲರಿಗೆ ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಉದ್ದೇಶವಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಸಿದ್ದರಾಮಪ್ಪ ಕಲ್ಯಾಣಕರ್, ಹಿರಿಯ ವಕೀಲರಾದ ಇಧುದರ್ ಪಾಟೇಲ್, ಪರಶುರಾಮ ಮಾಡಗಿರಿ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಹನುಮಂತರೆಡ್ಡಿ, ಉಪಾಧ್ಯಕ್ಷ ಗೌಸ್ ಪಾಶ, ಸಹ ಕಾರ್ಯದರ್ಶಿ ಮರಿಯಪ್ಪ, ಖಜಾಂಚಿ ರೇಣುಕಾ, ವಕೀಲರಾದ ಎಚ್. ಹನುಮಂತಪ್ಪ, ವಿರೂಪಾಕ್ಷಿಗೌಡ, ಆಂಜನೇಯ, ಶಿವಕುಮಾರ್ ನಾಯಕ, ಶಿವಕುಮಾರ್ ಮಾಗಳಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ನೂರಾರು ವಕೀಲರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.