ರಾಯಚೂರು: ಕರ್ನಾಟಕ ಮಡಿವಾಳ ಸಂಘದ ರಾಯಚೂರು ಜಿಲ್ಲಾಧ್ಯಕ್ಷರಾಗಿ ಯು. ಆಂಜನೇಯ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ ಎಂದು ಮಡಿವಾಳ ಮಾಚಿದೇವ ನಿಗಮದ ಅಧ್ಯಕ್ಷ ಹಾಗೂ ಕರ್ನಾಟಕ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ನಂಜಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮಡಿವಾಳ ಸಂಘವು 1933ರಿಂದ ನೋಂದಾಯಿತ ಸಂಘವಾಗಿದ್ದು, ರಾಜ್ಯ ಸಂಘದ ಮಾರ್ಗದರ್ಶನದಲ್ಲಿ ಜಿಲ್ಲಾಮಟ್ಟದ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರ ಬಹುಮತದ ಅಭಿಪ್ರಾಯದ ಆಧಾರದ ಮೇಲೆ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಬಳಿಕ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಸಮಿತಿ ಅಧಿಕೃತವಾಗಿ ಆಯ್ಕೆಯನ್ನು ಘೋಷಿಸುತ್ತಾರೆ ಎಂದು ವಿವರಿಸಿದರು.
ರಾಯಚೂರು ಜಿಲ್ಲಾ ಘಟಕದ ಹಿಂದಿನ ಅಧ್ಯಕ್ಷ ಜಂಬಣ್ಣ ಅವರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗಿದ್ದು, ಅದರಂತೆ ಯು. ಆಂಜನೇಯ ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ವಿಷಯದಲ್ಲಿ ಯಾವುದೇ ಅನುಮಾನ ಅಥವಾ ಗೊಂದಲಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಸಂಘದ ನಾಯಕತ್ವಕ್ಕೆ ಸಂಬಂಧಿಸಿದಂತೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಯಚೂರಿಗೆ ಆಗಮಿಸಿದ್ದೇನೆ. ಹಿಂದಿನ ಅಧ್ಯಕ್ಷ ಜಂಬಣ್ಣ ಅವರೊಂದಿಗೂ ಮಾತುಕತೆ ನಡೆಸಿ, ಸಮಾಜದ ಎಲ್ಲ ಮುಖಂಡರನ್ನು ಒಂದೇ ವೇದಿಕೆಗೆ ತರಲು ಪ್ರಯತ್ನಿಸಲಾಗುವುದು ಎಂದರು.
ಹಿಂದಿನ ಅಧ್ಯಕ್ಷರು ಸಮಾಜದ ಅಭಿವೃದ್ಧಿಗಾಗಿ ಹಲವು ಕೆಲಸಗಳನ್ನು ಮಾಡಿದ್ದಾರೆ. ನೂತನ ಅಧ್ಯಕ್ಷರೂ ಅದೇ ದಾರಿಯಲ್ಲಿ ಸಮಾಜದ ಹಿತಾಸಕ್ತಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸಂಘದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದ್ದು, ಎಲ್ಲಾ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗೆ ಅಂತ್ಯ ಹಾಡುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಮಡಿವಾಳ ಮಾಚಿದೇವ ನಿಗಮಕ್ಕೆ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ₹33 ಕೋಟಿ ಅನುದಾನ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ₹12 ಕೋಟಿ ಅನುದಾನ ಲಭ್ಯವಾಗಿದೆ. ನಿಗಮದ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಮತ್ತು ಸರ್ಕಾರದಿಂದ ಸಕಾರಾತ್ಮಕ ಭರವಸೆ ದೊರೆತಿದೆ ಎಂದು ಹೇಳಿದರು.
ಎಂಎಲ್ಸಿ ರಘು ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಂಜಪ್ಪ, ಅವರು ನೀಡಿರುವ ಹೇಳಿಕೆ ಎಲ್ಲ ನಿಗಮಗಳಿಗೆ ಸಂಬಂಧಿಸಿದ ಸಾಮಾನ್ಯ ಅಭಿಪ್ರಾಯವಾಗಿರಬಹುದು. ಮಡಿವಾಳ ಮಾಚಿದೇವ ನಿಗಮವನ್ನು ಉದ್ದೇಶಿಸಿ ಅವರು ಅಧಿಕೃತವಾಗಿ ಪ್ರತ್ಯೇಕ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದಿಗಂಬರ್, ಪದ್ಮ, ವೆಂಕಟರಾಮ್, ವೆಂಕಟೇಶ್, ಯು. ಆಂಜನೇಯ, ವಿರೂಪಾಕ್ಷಿ, ಪರಶುರಾಮ, ಶಿವಮೂರ್ತಿ ಸೇರಿದಂತೆ ಮಡಿವಾಳ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.



