ಕಲ್ಲೂರು, ಅ.6: ಸೊಳ್ಳೆಗಳ ಮೂಲಕ ಹರಡುವ ಆನೆಕಾಲು ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ನಿಯಂತ್ರಿಸಲು ಆರೋಗ್ಯ ಇಲಾಖೆ ನಡೆಸುತ್ತಿರುವ ರಾತ್ರಿವೇಳೆಯ ರಕ್ತಲೇಪನ ಪರೀಕ್ಷೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂಗಮೇಶ್ ಮನವಿ ಮಾಡಿದರು.

ರಾಯಚೂರು ತಾಲೂಕಿನ ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನೀರಮಾನವಿ ಕ್ರಾಸ್ ಬಳಿ ರಾತ್ರಿ ವೇಳೆ ಹಮ್ಮಿಕೊಂಡಿದ್ದ ರಕ್ತಲೇಪನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಯೂಲೆಕ್ಸ್ ಸೊಳ್ಳೆಗಳ ಮೂಲಕ ಆನೆಕಾಲು ರೋಗ ಹರಡುವ ಸಾಧ್ಯತೆ ಇದ್ದು, ಸೋಂಕಿತ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರನ್ನು ಕಚ್ಚಿದಾಗ ರೋಗಕಾರಕ ಪರಾವಲಂಬಿಗಳು ದೇಹಕ್ಕೆ ಪ್ರವೇಶಿಸಬಹುದು. ಅವು ರಕ್ತ ಹಾಗೂ ದುಗ್ಧರಸ ನಾಳಗಳಲ್ಲಿ ಬೆಳೆಯುವುದರಿಂದ ಕ್ರಮೇಣ ಕೈ-ಕಾಲು ಸೇರಿದಂತೆ ದೇಹದ ಕೆಲವು ಭಾಗಗಳಲ್ಲಿ ಊತ ಉಂಟಾಗಬಹುದು ಎಂದು ತಿಳಿಸಿದರು.

ಆನೆಕಾಲು ರೋಗದ ಲಕ್ಷಣಗಳು ತಕ್ಷಣ ಕಾಣಿಸಿಕೊಳ್ಳದೇ ದೀರ್ಘಕಾಲದ ಬಳಿಕ ಗೋಚರಿಸುವ ಸಾಧ್ಯತೆ ಇದೆ. ಆರಂಭದಲ್ಲಿ ಜ್ವರ, ಚಳಿ, ಚರ್ಮದ ಸೋಂಕು ಮತ್ತು ಊತ ಕಾಣಿಸಿಕೊಂಡು, ಮುಂದಿನ ಹಂತಗಳಲ್ಲಿ ಚರ್ಮ ದಪ್ಪವಾಗುವುದು ಹಾಗೂ ನಡೆಯಲು ತೊಂದರೆಯಾಗುವಂತಹ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಆರಂಭದಲ್ಲೇ ರೋಗ ಪತ್ತೆಹಚ್ಚುವುದು ಅತ್ಯಂತ ಮುಖ್ಯ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಯ್ದ ಗ್ರಾಮಗಳಲ್ಲಿ ರಾತ್ರಿ ರಕ್ತಲೇಪನ ಪರೀಕ್ಷೆ ನಡೆಸಲಾಗುತ್ತಿದೆ. ಸಾರ್ವಜನಿಕರು ಪರೀಕ್ಷೆಗೆ ಹಿಂಜರಿಯದೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಚರಂಡಿ ಹಾಗೂ ತಿಪ್ಪೆ ಪ್ರದೇಶಗಳನ್ನು ಸ್ವಚ್ಛವಾಗಿಡುವುದು ಮತ್ತು ಮನೆ, ಹೊಲ ಹಾಗೂ ಗದ್ದೆಗಳಲ್ಲಿ ಕೆಲಸ ಮಾಡುವಾಗ ಸೊಳ್ಳೆ ಕಚ್ಚದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ರಕ್ತಲೇಪನ ಕಾರ್ಯದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಮಂಜುಳಾ ಶುಕ್ಲಾ, ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವನಾಥ್, ಆಶಾ ಕಾರ್ಯಕರ್ತೆ ಅನುರಾಧಾ, ಅಂಗನವಾಡಿ ಕಾರ್ಯಕರ್ತೆ ಅಮರಮ್ಮ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.