ರಾಯಚೂರು: ಭಾರತ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಹರದೀಪ್ ಸಿಂಗ್ ಗಿಲ್ ಅವರು ರಾಯಚೂರು ನಗರಕ್ಕೆ ಭೇಟಿ ನೀಡಿ, ಸಫಾಯಿ ಕರ್ಮಚಾರಿಗಳು ಹಾಗೂ ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನೇರವಾಗಿ ಮಾಹಿತಿ ಪಡೆದುಕೊಂಡರು.

ನಗರದಲ್ಲಿ ಸಫಾಯಿ ಕರ್ಮಚಾರಿಗಳೊಂದಿಗೆ ಮುಕ್ತ ಸಂವಾದ ನಡೆಸಿದ ಅವರು, ಕೆಲಸದ ಪರಿಸ್ಥಿತಿ, ಮೂಲಸೌಕರ್ಯ, ಸುರಕ್ಷತೆ ಹಾಗೂ ಇತರ ಬೇಡಿಕೆಗಳ ಕುರಿತು ಅವರ ಅಹವಾಲುಗಳನ್ನು ಆಲಿಸಿದರು. ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಕರ್ನಾಟಕ ಸಫಾಯಿ ಕರ್ಮಚಾರಿ ಪರಿಷತ್ ಕಾರ್ಯಕರ್ತರ ನಿಯೋಗ ಹರದೀಪ್ ಸಿಂಗ್ ಗಿಲ್ ಅವರನ್ನು ಭೇಟಿ ಮಾಡಿ, ಸಫಾಯಿ ಕರ್ಮಚಾರಿಗಳು ಹಾಗೂ ಪೌರಕಾರ್ಮಿಕರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಗಮನ ಸೆಳೆಯಿತು. ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್, ಕರ್ನಾಟಕ ಸಫಾಯಿ ಕರ್ಮಚಾರಿ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಜೆ.ಎಂ. ವೀರೇಶ್, ಜಿಲ್ಲಾಧ್ಯಕ್ಷ ಜೆ.ಎಂ. ಮೌನೇಶ್, ಮಾಜಿ ನಗರಸಭಾ ಸದಸ್ಯ ಮಂಚಲ್ ಭೀಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ರೆಡ್ಡಿ, ಮುಖಂಡರಾದ ಎಂ. ನರಸಿಂಹಲು, ಉಮೇಶ್, ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.