ರಾಯಚೂರು: ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಗಿಲ್ಲೆಸೂಗೂರು ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಮೂಲಸೌಕರ್ಯಗಳ ಕೊರತೆಯಿಂದ ಬಳಕೆಗೆ ಬಾರದ ಸ್ಥಿತಿಯಲ್ಲಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಶೌಚಾಲಯವನ್ನು ದುರಸ್ತಿಗೊಳಿಸಿ ದಿನದ 24 ಗಂಟೆಯೂ ಬಳಕೆಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮಲ್ಲಿಕಾರ್ಜುನ ಆಗ್ರಹಿಸಿದ್ದಾರೆ.
ಗಿಲ್ಲೆಸೂಗೂರು ಹೋಬಳಿ ಕೇಂದ್ರವಾಗಿರುವುದರ ಜೊತೆಗೆ ಮಾನ್ವಿ, ಆದೋನಿ, ಮಂತ್ರಾಲಯ, ಪಂಚಮುಖಿ ಗಣದಾಳ ಸೇರಿದಂತೆ ವಿವಿಧ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿದೆ. ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲಿನ ಬಸ್ ನಿಲ್ದಾಣವನ್ನು ಅವಲಂಬಿಸುತ್ತಿದ್ದು, ಅಗತ್ಯ ಮೂಲಸೌಕರ್ಯಗಳಲ್ಲಿ ಒಂದಾದ ಶೌಚಾಲಯವೇ ಬಳಕೆಗೆ ಲಭ್ಯವಿಲ್ಲದಿರುವುದು ಸಮಸ್ಯೆಯಾಗಿದೆ ಎಂದು ಅವರು ದೂರಿದ್ದಾರೆ.
ರಾಯಚೂರು ಸಾರಿಗೆ ನಿಗಮದಿಂದ 2025ರ ಜನವರಿಯಲ್ಲಿ ಜಿಲ್ಲೆಯ ತಾಲೂಕು ಹಾಗೂ ಹೋಬಳಿ ಕೇಂದ್ರಗಳು ಸೇರಿದಂತೆ ಒಟ್ಟು 14 ಬಸ್ ನಿಲ್ದಾಣಗಳ ಶೌಚಾಲಯಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿತ್ತು. ಕೊಪ್ಪಳ ಜಿಲ್ಲೆಯ ರಾಜೇಶ್ ಎಂಬುವವರು ಗುತ್ತಿಗೆ ಪಡೆದಿದ್ದಾರೆ ಎಂದು ಮಲ್ಲಿಕಾರ್ಜುನ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಟೆಂಡರ್ ನೀಡಿ ಸುಮಾರು ಒಂದು ವರ್ಷ ಹತ್ತು ತಿಂಗಳು ಕಳೆದಿದ್ದರೂ ಗಿಲ್ಲೆಸೂಗೂರು ಬಸ್ ನಿಲ್ದಾಣದ ಶೌಚಾಲಯ ಪ್ರಯಾಣಿಕರ ಬಳಕೆಗೆ ಸಮರ್ಪಕವಾಗಿ ಲಭ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.
ಶೌಚಾಲಯದ ಕೋಣೆಗಳಲ್ಲಿ ಸ್ವಚ್ಛತೆ ಇಲ್ಲ, ವಿದ್ಯುತ್ ಸಂಪರ್ಕ ಹಾಗೂ ನೀರಿನ ವ್ಯವಸ್ಥೆಯೂ ಇಲ್ಲ. ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು, ನಿರ್ವಹಣೆಗೆ ಸಿಬ್ಬಂದಿಯೂ ಇಲ್ಲದ ಪರಿಸ್ಥಿತಿ ಇದೆ. ಇದರಿಂದ ವಿಶೇಷವಾಗಿ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಪ್ರಯಾಣಿಕರು ಶೌಚಾಲಯಕ್ಕಾಗಿ ಪರದಾಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಗುತ್ತಿಗೆದಾರರು ಶೌಚಾಲಯದ ನಿರ್ವಹಣೆಗೆ ಗಮನ ನೀಡದಿದ್ದರೂ ಸಂಬಂಧಪಟ್ಟ ಸಾರಿಗೆ ನಿಗಮದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಮಲ್ಲಿಕಾರ್ಜುನ, ಈ ನಿರ್ಲಕ್ಷ್ಯದ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಗಿಲ್ಲೆಸೂಗೂರು ಬಸ್ ನಿಲ್ದಾಣದ ಶೌಚಾಲಯದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಕೆಕೆಆರ್ಟಿಸಿ ರಾಯಚೂರು ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆದು, ನಿರ್ವಹಣೆಯಲ್ಲಿ ಲೋಪ ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ನೀರು, ವಿದ್ಯುತ್, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಶೌಚಾಲಯವನ್ನು ಶೀಘ್ರವೇ ಪ್ರಯಾಣಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಮಲ್ಲಿಕಾರ್ಜುನ ಆಗ್ರಹಿಸಿದ್ದಾರೆ.



