ರಾಯಚೂರು, ಅ.7: ಭಾರತೀಯ ಪರಂಪರೆಯ ಆಯುರ್ವೇದ ಚಿಕಿತ್ಸಾ ಪದ್ಧತಿ ಆರೋಗ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಜನರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೇಶವ ರೆಡ್ಡಿ ಹೇಳಿದರು.

ರಾಯಚೂರು ರಿಪೋರ್ಟರ್ಸ್ ಗಿಲ್ಡ್ (ರಿ.) ಬೆಳ್ಳಿ ಮಹೋತ್ಸವ–2026ರ ಅಂಗವಾಗಿ ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ತಾವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಆಯುರ್ವೇದ ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡಿದ್ದನ್ನು ಸ್ಮರಿಸಿದ ಅವರು, ಆಯುರ್ವೇದ ಚಿಕಿತ್ಸೆಯ ಮಹತ್ವವನ್ನು ಜನರಿಗೆ ತಲುಪಿಸಬೇಕೆಂಬ ಆಶಯವೂ ಸಂಸ್ಥೆಯ ಸೇವಾ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ ಎಂದರು.

ಆಧುನಿಕ ಚಿಕಿತ್ಸಾ ಪದ್ಧತಿಗಳು ವ್ಯಾಪಕವಾಗುವುದಕ್ಕೂ ಮುನ್ನ ನಮ್ಮ ಪೂರ್ವಜರು ಆಯುರ್ವೇದ ಸೇರಿದಂತೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳನ್ನು ಅವಲಂಬಿಸಿದ್ದರು. ಆಯುರ್ವೇದವು ಭಾರತೀಯ ವೈದ್ಯಕೀಯ ಪರಂಪರೆಯ ಪ್ರಮುಖ ಭಾಗವಾಗಿದೆ. ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜನ್ನು ಕೇವಲ ವಾಣಿಜ್ಯ ಉದ್ದೇಶದಿಂದ ಸ್ಥಾಪಿಸಿಲ್ಲ; ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಆರ್ಥಿಕವಾಗಿ ಹಿಂದುಳಿದವರಿಗೆ ಚಿಕಿತ್ಸೆ ಪಡೆಯಲು ಹಣಕಾಸಿನ ತೊಂದರೆ ಎದುರಾದರೆ ಅಂತಹ ಅರ್ಹ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಸಂಸ್ಥೆ ಸಿದ್ಧವಿದೆ. ಅವರ ಚಿಕಿತ್ಸೆಗೆ ಅಗತ್ಯವಾಗುವ ವೆಚ್ಚವನ್ನು ಕಾಲೇಜಿನ ವತಿಯಿಂದ ಭರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಶವ ರೆಡ್ಡಿ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕರ್ಮುಡಿ ಮಾತನಾಡಿ, ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯಚಟುವಟಿಕೆಗಳನ್ನು ಸಂಬಂಧಪಟ್ಟ ನಿಯಮ ಹಾಗೂ ಕಾನೂನುಗಳ ಅನುಸಾರ ನಡೆಸಲಾಗುತ್ತಿದೆ. ಆಯುರ್ವೇದದಲ್ಲಿ ವಿವಿಧ ಕಾಯಿಲೆಗಳಿಗೆ ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, ಮೂಲವ್ಯಾಧಿ (ಪೈಲ್ಸ್) ಸಮಸ್ಯೆಗೂ ಆಯುರ್ವೇದದಲ್ಲಿ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಿವೆ ಎಂದರು.

ಔಷಧ ತಯಾರಿಕೆಗೆ ಅಗತ್ಯವಾಗುವ ಹಲವು ಔಷಧೀಯ ಗಿಡಮೂಲಿಕೆಗಳನ್ನು ಸಂಸ್ಥೆಯಲ್ಲಿಯೇ ಬೆಳೆಸಲಾಗುತ್ತಿದೆ. ಕೆಲವು ಸಸ್ಯಗಳಿಂದ ಔಷಧೀಯ ತೈಲಗಳನ್ನು ತಯಾರಿಸಲಾಗುತ್ತಿದ್ದು, ಆಸ್ಪತ್ರೆಯಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ ಎಂದು ಮಾಹಿತಿ ನೀಡಿದರು.

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟ್ಕಲ್ ಮಾತನಾಡಿ, ಸಾಮಾನ್ಯವಾಗಿ ಆರೋಗ್ಯ ಸಮಸ್ಯೆ ಎದುರಾದಾಗ ಅಲೋಪಥಿ ಚಿಕಿತ್ಸೆಯತ್ತ ಹೆಚ್ಚಿನವರು ಮೊರೆ ಹೋಗುತ್ತಾರೆ. ಆದರೆ ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಹೆಚ್ಚಬೇಕಾಗಿದೆ. ಸೂಕ್ತ ವೈದ್ಯಕೀಯ ಸಲಹೆಯೊಂದಿಗೆ ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ ಎಂದು ಹೇಳಿದರು.

ಶಿಬಿರದಲ್ಲಿ ಪತ್ರಕರ್ತರ ಆರೋಗ್ಯ ತಪಾಸಣೆ ನಡೆಸಿದ ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯರು, ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಿದರು. ಹಲವು ಪತ್ರಕರ್ತರು ಆರೋಗ್ಯ ತಪಾಸಣೆಗೆ ಒಳಗಾಗಿ ಆಯುರ್ವೇದ ಚಿಕಿತ್ಸಾ ವಿಧಾನಗಳ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಖಾನ್ ಮೊಹಿಮೀನ್, ವೀರನಗೌಡ, ಚೆನ್ನಬಸವ ಬಾಗಲವಾಡ, ವೆಂಕಟೇಶ ಹೂಗಾರ ಸೇರಿದಂತೆ ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಹಲವು ಪತ್ರಕರ್ತರು, ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವೈದ್ಯರು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.