ರಾಯಚೂರು, ಅ.7: ಗುಜರಾತ್ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಆಡಳಿತದ ಜವಾಬ್ದಾರಿ ಹೊತ್ತು 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕ ಬುಧವಾರ ನಗರದಲ್ಲಿ ಆಯೋಜಿಸಿದ್ದ ‘ಸೇವಾ ಜ್ಯೋತಿ’ ಕಾರ್ಯಕ್ರಮವು ಪಕ್ಷದ ಕಾರ್ಯಕರ್ತರ ಬೃಹತ್ ಸಮಾಗಮಕ್ಕೆ ಸಾಕ್ಷಿಯಾಯಿತು.

ನಗರದ ಮಾ ಆಶಾಪೂರಿ ಫಂಕ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಭಾಂಗಣ ತುಂಬಿ ತುಳುಕುವಂತೆ ಸೇರಿದ್ದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ನೇರ ಪ್ರಸಾರದ ಭಾಷಣವನ್ನು ವೀಕ್ಷಿಸಿದರು.

2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿ, ಸ್ವದೇಶಿ ಉತ್ಪಾದನೆಗೆ ಹೆಚ್ಚಿನ ಆದ್ಯತೆ ಹಾಗೂ ‘ಮೇಡ್ ಇನ್ ಇಂಡಿಯಾ’ವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಕುರಿತು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಟೀಕೆಗಳಿಗೆ ಮಾತಿನ ಮೂಲಕವಲ್ಲ, ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತರ ನೀಡಬೇಕು ಎಂಬ ಅವರ ಸಂದೇಶ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿತು.

ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನಗಳಿಂದ ಎದುರಾದ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಮುನ್ನಡೆದ ಅನುಭವವನ್ನು ಮೋದಿ ಹಂಚಿಕೊಂಡರು. ಜನರ ವಿಶ್ವಾಸ ಮತ್ತು ಆಶೀರ್ವಾದವೇ ತಮ್ಮ ಸಾರ್ವಜನಿಕ ಜೀವನದ ಶಕ್ತಿಯಾಗಿದ್ದು, ಇಂದು 140 ಕೋಟಿ ಭಾರತೀಯರ ಸೇವಕನಾಗಿ ದೇಶದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು.

ಹಿಂದಿನ ಕಾಲಘಟ್ಟದಲ್ಲಿ ಭಾರತ ಹಲವು ಸಂಕಷ್ಟಗಳನ್ನು ಎದುರಿಸಿದ್ದರೂ, ದೇಶದ ಜನರ ಪರಿಶ್ರಮ, ಸಂಕಲ್ಪ ಹಾಗೂ ಸಾಮರ್ಥ್ಯದಿಂದ ಇಂದು ಭಾರತ ವಿಶ್ವದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ ಎಂಬ ಸಂದೇಶವನ್ನೂ ಅವರು ನೀಡಿದರು. ಪ್ರಧಾನಿಯವರ ಭಾಷಣದ ವಿವಿಧ ಅಂಶಗಳಿಗೆ ಸಭಾಂಗಣದಲ್ಲಿ ನೆರೆದಿದ್ದ ಕಾರ್ಯಕರ್ತರಿಂದ ಸ್ಪಂದನೆ ವ್ಯಕ್ತವಾಯಿತು.

ಬಳಿಕ ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ನಗರ ಶಾಸಕ ಡಾ. ಶಿವರಾಜ್ ಪಾಟೀಲ, ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಶಂಕ್ರಪ್ಪ, ಮಾಜಿ ಶಾಸಕರಾದ ಕೆ. ಶಿವನಗೌಡ ನಾಯಕ, ಬಸನಗೌಡ ಬ್ಯಾಗವಾಟ ಹಾಗೂ ಕೆ. ಕರಿಯಪ್ಪ ಸೇರಿದಂತೆ ಪಕ್ಷದ ಪ್ರಮುಖರು ‘ಸೇವಾ ಜ್ಯೋತಿ’ಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಾಜಕುಮಾರ, ತ್ರಿವಿಕ್ರಮ ಜೋಶಿ, ಕೆ.ಎಂ. ಪಾಟೀಲ, ಸಿದ್ದನಗೌಡ ನೆಲೆಹಾಳ, ಊಟ್ಕೂರು ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ರಾಜಗುರು, ರವೀಂದ್ರ ಜಲ್ದಾರ್, ಜಂಬಣ್ಣ ನಿಲೋಗಲ್, ಬಿ. ಗೋವಿಂದ, ಟಿ. ಶ್ರೀನಿವಾಸ ರೆಡ್ಡಿ, ಕಡಗೋಲು ಆಂಜನೇಯ, ಎನ್. ಶ್ರೀನಿವಾಸ ರೆಡ್ಡಿ, ಎನ್.ಕೆ. ನಾಗರಾಜ, ಈ. ಶಶಿರಾಜ, ಮಹೇಂದ್ರ ರೆಡ್ಡಿ, ಪೋಗುಲ ಶ್ರೀನಿವಾಸ, ಪಿ. ಯಲ್ಲಪ್ಪ, ವಿಷ್ಣು ರೆಡ್ಡಿ, ಯು. ನರಸರೆಡ್ಡಿ, ನರಸಪ್ಪ ಯಕ್ಲಾಸಪೂರು, ಶರಣಬಸವ ಪಾಟೀಲ ಜೋಳದಡಗಿ, ಶರಣ ಬಸವ ಸೊಪ್ಪಿಮಠ, ಕೊಟ್ರೇಶಪ್ಪ ಕೋರಿ, ತಿಮ್ಮಪ್ಪ ಫಿರಂಗಿ, ಮಹಾಂತೇಶ ಮಸ್ಕಿ, ಜೆ.ಎಂ. ಮೌನೇಶ, ಪ್ರದೀಪ ಸಾನಬಾಳ, ಪಲುಗುಲ ನಾಗರಾಜ, ವಿಜ್ಞಾನ ವೆಂಕಟೇಶ, ಎನ್. ವಿನಾಯಕ ರಾವ್, ಶರಣಮ್ಮ ಕಾಮರೆಡ್ಡಿ, ಸುಮಾ ಅಶೋಕ ಗಸ್ತಿ, ಸೀತಾ ನಾಯಕ, ಅಶ್ವಿನಿ ಸೇರಿದಂತೆ ವಿವಿಧ ಮಂಡಲಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ‘ಸೇವಾ ಜ್ಯೋತಿ’ಯನ್ನು ವಿಶೇಷವಾಗಿ ಅಲಂಕರಿಸಿದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಗರದ ಅಂಬೇಡ್ಕರ್ ವೃತ್ತದವರೆಗೆ ಕೊಂಡೊಯ್ಯಲಾಯಿತು. ವಿವಿಧ ಮಂಡಲಗಳಿಂದ ಆಗಮಿಸಿದ್ದ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಪಕ್ಷದ ಸಂಘಟನಾ ಬಲವನ್ನು ಪ್ರದರ್ಶಿಸಿದರು.