ರಾಯಚೂರು, ಅ.7: ಮನೆಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ ಗೃಹಬಳಕೆಯ ವಿದ್ಯುತ್ ಗ್ರಾಹಕರಿಗೆ ₹78 ಸಾವಿರದವರೆಗೆ ಸಹಾಯಧನ ನೀಡಲಾಗುತ್ತಿದೆ.
ಈ ಯೋಜನೆಯ ಮೂಲಕ ಮನೆಗಳಲ್ಲಿಯೇ ಸೌರ ವಿದ್ಯುತ್ ಉತ್ಪಾದನೆಗೆ ಅವಕಾಶ ಕಲ್ಪಿಸಿ, ವಿದ್ಯುತ್ ಬಿಲ್ ವೆಚ್ಚವನ್ನು ಕಡಿಮೆ ಮಾಡುವುದು ಹಾಗೂ ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ. ದೇಶದ ಒಂದು ಕೋಟಿ ಕುಟುಂಬಗಳಿಗೆ ಯೋಜನೆಯ ಪ್ರಯೋಜನ ತಲುಪಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.
ಯೋಜನೆಯಡಿ 1 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಅಳವಡಿಕೆಗೆ ₹30 ಸಾವಿರ, 2 ಕಿಲೋವ್ಯಾಟ್ ಸಾಮರ್ಥ್ಯಕ್ಕೆ ₹60 ಸಾವಿರ ಹಾಗೂ 3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಘಟಕಗಳಿಗೆ ಗರಿಷ್ಠ ₹78 ಸಾವಿರ ಸಹಾಯಧನ ನಿಗದಿಪಡಿಸಲಾಗಿದೆ.
ಸೌರ ವಿದ್ಯುತ್ ಘಟಕ ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಗೃಹಬಳಕೆಯ ವಿದ್ಯುತ್ ಗ್ರಾಹಕರು ಯೋಜನೆಯ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಸಹಾಯಧನದ ಷರತ್ತುಗಳ ಕುರಿತು ಅಧಿಕೃತ ಪೋರ್ಟಲ್ https://www.pmsuryaghar.gov.in ಮೂಲಕ ಮಾಹಿತಿ ಪಡೆಯಬಹುದು.
ರಾಯಚೂರು ಜಿಲ್ಲೆಯ ಅರ್ಹ ಗ್ರಾಹಕರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಜೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



