ರಾಯಚೂರು, ಅ.8: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಐತಿಹಾಸಿಕ ಬೌದ್ಧ ಧಮ್ಮ ದೀಕ್ಷೆಯ 70ನೇ ವರ್ಷಾಚರಣೆ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಕರ್ನಾಟಕ ಧಮ್ಮ ಜನಜಾಗೃತಿ ದೀಕ್ಷಾ ಯಾತ್ರೆಯು ಅಕ್ಟೋಬರ್ 6ರಂದು ಸಂಜೆ ರಾಯಚೂರು ನಗರಕ್ಕೆ ಆಗಮಿಸಿದ್ದು, ಸಿದ್ಧಾರ್ಥ ಬುದ್ಧವಿಹಾರ ಸಮಿತಿ ಹಾಗೂ ಬೌದ್ಧ ಉಪಾಸಕರು ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಅಂತರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಹಾಗೂ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಈ ಯಾತ್ರೆಯು ನಗರದ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಳಿಕ ಬೌದ್ಧ ಉಪಾಸಕರು ತ್ರಿಸರಣ ಪಠಣ ಮಾಡುತ್ತಾ ಯಾತ್ರೆಯನ್ನು ನಗರದ ಸಿದ್ಧಾರ್ಥ ಬುದ್ಧವಿಹಾರಕ್ಕೆ ಬರಮಾಡಿಕೊಂಡರು.
ಸಿದ್ಧಾರ್ಥ ಬುದ್ಧವಿಹಾರದಲ್ಲಿ ಬುದ್ಧ ವಂದನೆ ಸಲ್ಲಿಸಿದ ನಂತರ ನಡೆದ ಧಮ್ಮ ಸಂದೇಶ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಝೆನ್ ಮಾಂಕ್ ಡಾ. ಶಾಕು ಬೋಧಿ ಧಮ್ಮ ಅವರು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 1956ರ ಅಕ್ಟೋಬರ್ 14ರಂದು ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸುಮಾರು ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸಿದ್ದು ಭಾರತದ ಸಾಮಾಜಿಕ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಆಧರಿಸಿದ ಬೌದ್ಧ ಧಮ್ಮದ ತತ್ವಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವುದು ಈ ಜನಜಾಗೃತಿ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಬೌದ್ಧ ಧಮ್ಮ ದೀಕ್ಷೆಯ 70ನೇ ವರ್ಷಾಚರಣೆಯ ಸ್ಮರಣಾರ್ಥ ಅಕ್ಟೋಬರ್ 5ರಂದು ಬೆಳಿಗ್ಗೆ ಕಲಬುರಗಿ ನಗರದ ಜಗತ್ ಸರ್ಕಲ್ನಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ಯಾತ್ರೆಗೆ ಚಾಲನೆ ನೀಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ಸಂಚರಿಸುವ ಈ ಯಾತ್ರೆಯ ಮೂಲಕ ಬುದ್ಧನ ಶಾಂತಿ ಸಂದೇಶ, ವೈಚಾರಿಕ ಚಿಂತನೆ, ಸಾಮಾಜಿಕ ಸಮಾನತೆ ಮತ್ತು ಧಮ್ಮದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
ಸುಮಾರು ಒಂದು ತಿಂಗಳ ಕಾಲ ರಾಜ್ಯಾದ್ಯಂತ ಸಂಚರಿಸಲಿರುವ ಯಾತ್ರೆಯು ನವೆಂಬರ್ 1ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಿಲ್ಲೆಯ ಐತಿಹಾಸಿಕ ಬೌದ್ಧ ಕ್ಷೇತ್ರ ಸನ್ನತಿಗೆ ತಲುಪಲಿದೆ. ಅಲ್ಲಿ ಬೌದ್ಧ ಸಂಪ್ರದಾಯದಂತೆ ಯಾತ್ರೆಯನ್ನು ಸ್ವಾಗತಿಸಲಾಗುವುದು. ಬಳಿಕ ಮಧ್ಯಾಹ್ನ ‘ಮರಳಿ ಬುದ್ಧನಡೆಗೆ’ ಎಂಬ ಆಶಯದೊಂದಿಗೆ ನಾಡಿನ ಭಿಕ್ಕು ಸಂಘದ ನೇತೃತ್ವದಲ್ಲಿ ಅಂತರಾಷ್ಟ್ರೀಯ ಬೌದ್ಧ ಯುವ ಸಂಘಟನೆ ಹಾಗೂ ಸನ್ನತಿಯ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಧಮ್ಮ ದೀಕ್ಷಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬೌದ್ಧ ಧಮ್ಮವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಮನುಷ್ಯನ ಬದುಕಿನಲ್ಲಿ ನೈತಿಕತೆ, ಕರುಣೆ, ಮೈತ್ರಿ, ಸಹಬಾಳ್ವೆ ಮತ್ತು ಸಮಾನತೆಯ ಮೌಲ್ಯಗಳನ್ನು ಬೆಳೆಸುವ ಜೀವನ ಮಾರ್ಗವಾಗಿದೆ. ಬುದ್ಧ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಯುವಜನತೆಗೆ ಪರಿಚಯಿಸುವ ಮೂಲಕ ವೈಚಾರಿಕ ಮತ್ತು ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಧಮ್ಮಚಾರಿ ನರಸಿಂಹಲು, ಸಿದ್ಧಾರ್ಥ ಬುದ್ಧವಿಹಾರ ಸಮಿತಿಯ ಗೌರವಾಧ್ಯಕ್ಷ ರವೀಂದ್ರನಾಥ ಪಟ್ಟಿ, ಉಪಾಧ್ಯಕ್ಷರಾದ ಜಗನ್ನಾಥ ಸುಂಕಾರಿ, ಶ್ರೀನಿವಾಸ ಮಚಾರ್ಲಾ, ಕಾರ್ಯಾಧ್ಯಕ್ಷ ಆರ್. ತಿಮ್ಮಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಶೇಖರ್ ರಾಂಪೂರಿ, ಖಜಾಂಚಿ ಆರ್. ಬಸವರಾಜ, ಸದಸ್ಯರಾದ ಮಲ್ಲೇಶ್ ಕೊಲಿಮಿ, ಪ್ರಾಣೇಶ್ ಮಂಚಾಲ್, ಕೆ.ಈ. ಕುಮಾರ್, ವೆಂಕಟೇಶ್ ಅರೋಲಿಕರ್ ಹಾಗೂ ಉಪಾಸಕರಾದ ವೆಂಕಟೇಶ್, ಆಂಜನೇಯ, ಸುರೇಶ್, ಕುಬೇರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬೌದ್ಧ ಉಪಾಸಕರು ಹಾಗೂ ಧಮ್ಮ ಅನುಯಾಯಿಗಳು ಭಾಗವಹಿಸಿದ್ದರು.



