ರಾಯಚೂರು, ಅ.8: ರಾಜ್ಯ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೊಳಿಸುವುದರ ಜೊತೆಗೆ ಉದ್ಯೋಗ ಭದ್ರತೆ ಹಾಗೂ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಜೆಸ್ಕಾಂ ರಾಯಚೂರು ವಿಭಾಗದ ಗುತ್ತಿಗೆ ಕಾರ್ಮಿಕರು ಗುರುವಾರ ನಗರದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು.
ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ (ಕೆಎಸ್ಇಡಬ್ಲ್ಯುಎಫ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಟಿಪ್ಪು ಸುಲ್ತಾನ್ ಗಾರ್ಡನ್ನಲ್ಲಿ ಜಮಾಯಿಸಿದ ಕಾರ್ಮಿಕರು, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜೆಸ್ಕಾಂ ರಾಯಚೂರು ವಿಭಾಗದಲ್ಲಿ ನೂರಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರದ ನಿಯಮಾನುಸಾರ ದೊರೆಯಬೇಕಾದ ವೇತನ ಹಾಗೂ ಇತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ಹೊರಡಿಸಿರುವ ಪರಿಷ್ಕೃತ ಕನಿಷ್ಠ ವೇತನದ ಅಧಿಸೂಚನೆಯನ್ನು ಅನುಷ್ಠಾನಗೊಳಿಸಿ, 2026ರ ಜೂನ್ ತಿಂಗಳಿಂದ ಅನ್ವಯವಾಗುವಂತೆ ವೇತನ ವ್ಯತ್ಯಾಸದ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪರಿಷ್ಕೃತ ವೇತನ ನೀಡುವ ವಿಚಾರದಲ್ಲಿ ಗುತ್ತಿಗೆದಾರರು ಕಾರ್ಮಿಕರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಘದ ಮುಖಂಡರು ಆರೋಪಿಸಿದರು. ಹೆಚ್ಚುವರಿಯಾಗಿ ಪಾವತಿಸುವ ವೇತನದ ಒಂದು ಭಾಗವನ್ನು ಪ್ರತಿ ತಿಂಗಳು ಹಿಂದಿರುಗಿಸುವಂತೆ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ಒಪ್ಪದ ಕಾರ್ಮಿಕರಿಗೆ ಪರಿಷ್ಕೃತ ವೇತನ ನೀಡದೆ ತಾರತಮ್ಯ ಮಾಡಲಾಗುತ್ತಿದೆ. ಅಲ್ಲದೆ, ಖಾಲಿ ಕಾಗದಗಳ ಮೇಲೆ ಸಹಿ ಪಡೆಯುವ ಮೂಲಕ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ ಎಂದು ದೂರಿದರು.
ವಿದ್ಯುತ್ ಸರಬರಾಜು ವ್ಯವಸ್ಥೆಯ ನಿರ್ವಹಣೆಯಲ್ಲಿ ಗುತ್ತಿಗೆ ಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಿದ್ದರೂ ಅವರ ಹಿತಾಸಕ್ತಿಗಳನ್ನು ಕಡೆಗಣಿಸಲಾಗುತ್ತಿದೆ. ದೀರ್ಘಕಾಲದಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಸಮರ್ಪಕ ಉದ್ಯೋಗ ಭದ್ರತೆ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ. ಕಾರ್ಮಿಕರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ನೀಡುವುದರ ಜೊತೆಗೆ ಅವರ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಜೆಸ್ಕಾಂ ಆಡಳಿತ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿ ತಿಂಗಳ 7ನೇ ತಾರೀಖಿನೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವೇತನ ಜಮಾ ಮಾಡಬೇಕು. ಇದುವರೆಗೆ ಸಮರ್ಪಕವಾಗಿ ಒದಗಿಸದ ನೌಕರರ ರಾಜ್ಯ ವಿಮೆ (ಇಎಸ್ಐ) ಸೌಲಭ್ಯವನ್ನು ತಕ್ಷಣ ಜಾರಿಗೊಳಿಸಿ ಪ್ರತಿಯೊಬ್ಬ ಅರ್ಹ ಕಾರ್ಮಿಕರಿಗೂ ಇಎಸ್ಐ ಕಾರ್ಡ್ ವಿತರಿಸಬೇಕು. ಭವಿಷ್ಯ ನಿಧಿ (ಪಿಎಫ್) ವಂತಿಗೆ ಪಾವತಿಯ ವಿವರ ಹಾಗೂ ರಶೀದಿಗಳನ್ನು ಕಾರ್ಮಿಕರಿಗೆ ನಿಯಮಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ವೇತನ ಮತ್ತು ಸೌಲಭ್ಯಗಳ ವಿಚಾರದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಗುತ್ತಿಗೆದಾರರಿಂದ ಕಾರ್ಮಿಕರಿಗೆ ಯಾವುದೇ ರೀತಿಯ ಒತ್ತಡ ಅಥವಾ ಶೋಷಣೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ತಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಫೆಡರೇಷನ್ ರಾಜ್ಯಾಧ್ಯಕ್ಷ ಸತ್ಯಬಾಬು, ಜಿಲ್ಲಾಧ್ಯಕ್ಷ ಕರಿಗೂಳಿ ವೀರೇಶ್ ನಾಗಲಾಪುರ ಹಾಗೂ ಗೌರವಾಧ್ಯಕ್ಷ ಡಿ.ಎಸ್. ಶರಣಬಸವ ವಹಿಸಿದ್ದರು. ಮೌನೇಶ್, ಅಮರೇಶ್, ಶರಣಪ್ಪ ಸೇರಿದಂತೆ ನೂರಾರು ಗುತ್ತಿಗೆ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.



