ಗಾಣದಾಳ್: ಕುರುಡುತನ ತಡೆಗಟ್ಟಲು ವಿಟಮಿನ್–ಎ ಸಮೃದ್ಧ ಆಹಾರ ಸೇವನೆಗೆ ಆದ್ಯತೆ ನೀಡುವುದರ ಜೊತೆಗೆ ಕಾಲಕಾಲಕ್ಕೆ ನೇತ್ರ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆಯಬೇಕು ಎಂದು ಮಟಮಾರಿ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ್ ಕುಮಾರ ಹೇಳಿದರು.
ಗಾಣದಾಳ್ ಆರೋಗ್ಯ ಕೇಂದ್ರ ಹಾಗೂ ಬುಳ್ಳಾಪುರ ಉಪಕೇಂದ್ರದ ವತಿಯಿಂದ ಚಿಕ್ಕಮಂಚಾಲಿ ಗ್ರಾಮದಲ್ಲಿ ಅ.8ರಂದು ಆಯೋಜಿಸಿದ್ದ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಿಮ್ಮ ಕಣ್ಣುಗಳನ್ನು ಪ್ರೀತಿಸಿ’ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕುರುಡುತನ, ದೃಷ್ಟಿದೋಷಗಳು ಹಾಗೂ ಕಣ್ಣಿನ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅಗತ್ಯ ನೇತ್ರ ಚಿಕಿತ್ಸೆಯನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವುದು ವಿಶ್ವ ದೃಷ್ಟಿ ದಿನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ವಯಸ್ಸು ಹೆಚ್ಚಾದಂತೆ ಕಣ್ಣಿನ ಪೊರೆ, ವಕ್ರೀಭವನ ದೋಷ, ಗ್ಲುಕೋಮಾ, ಮಧುಮೇಹ ಸಂಬಂಧಿತ ರೆಟಿನೋಪತಿ, ಕಣ್ಣು ಒಣಗುವುದು, ಕಣ್ಣಿನ ಸೋಂಕು ಹಾಗೂ ಡಿಜಿಟಲ್ ಪರದೆಗಳ ಅತಿಯಾದ ಬಳಕೆಯಿಂದ ಉಂಟಾಗುವ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಗಂಭೀರ ದೃಷ್ಟಿ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಹೇಳಿದರು.
ಹಠಾತ್ ದೃಷ್ಟಿ ಕಡಿಮೆಯಾಗುವುದು ಅಥವಾ ದೃಷ್ಟಿ ನಷ್ಟವಾಗುವುದು, ತೀವ್ರ ಕಣ್ಣಿನ ನೋವು, ಕಣ್ಣೆದುರು ಬೆಳಕಿನ ಹೊಳಪು ಅಥವಾ ಕಪ್ಪು ನೆರಳು ಕಾಣಿಸಿಕೊಳ್ಳುವುದು, ಕಣ್ಣಿಗೆ ಗಾಯವಾಗುವುದು, ರಾಸಾಯನಿಕ ವಸ್ತು ತಗುಲುವುದು, ತೀವ್ರ ಕೆಂಪಾಗುವಿಕೆ, ತಲೆನೋವು, ವಾಕರಿಕೆ ಅಥವಾ ವಾಂತಿಯೊಂದಿಗೆ ದೃಷ್ಟಿ ಮಂದವಾಗುವುದು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ವಿಳಂಬ ಮಾಡದೆ ನೇತ್ರ ತಜ್ಞರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಪಿಎಚ್ಸಿಒ ಉಷಾರಾಣಿ ಮಾತನಾಡಿ, ಉತ್ತಮ ದೃಷ್ಟಿ ಕೇವಲ ಓದುವ ಸಾಮರ್ಥ್ಯಕ್ಕೆ ಸೀಮಿತವಲ್ಲ. ಮಕ್ಕಳ ಕಲಿಕೆ, ವ್ಯಕ್ತಿಯ ಚಲನಶೀಲತೆ, ಉತ್ಪಾದಕತೆ, ಸ್ವಾವಲಂಬನೆ ಹಾಗೂ ಸಾಮಾಜಿಕ ಸಂಪರ್ಕಗಳ ಮೇಲೂ ಕಣ್ಣಿನ ಆರೋಗ್ಯ ನೇರ ಪರಿಣಾಮ ಬೀರುತ್ತದೆ ಎಂದರು.
ಮಕ್ಕಳಲ್ಲಿ ಓದಿನಲ್ಲಿ ಹಿಂದುಳಿಯುವುದು, ದಿನನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುವುದು ಅಥವಾ ದೃಷ್ಟಿ ಸಂಬಂಧಿತ ತೊಂದರೆಗಳ ಲಕ್ಷಣಗಳು ಕಂಡುಬಂದರೆ ಪೋಷಕರು ತಕ್ಷಣ ನೇತ್ರ ತಪಾಸಣೆ ಮಾಡಿಸಬೇಕು. ಕಣ್ಣಿನ ಆರೋಗ್ಯದ ಕುರಿತು ಅರಿವು ಬಾಲ್ಯದಿಂದಲೇ ಆರಂಭವಾಗಿ ಜೀವನಪೂರ್ತಿ ಮುಂದುವರಿಯಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಆಶಾ ಕಾರ್ಯಕರ್ತೆ ಅನಿತಾ ನಿರೂಪಿಸಿ ವಂದಿಸಿದರು.



