ರಾಯಚೂರು, ಅ.9: ಕರ್ನಾಟಕ ಮಾದಿಗ (ಮಾದರ) ಮಹಾಸಭಾದ ರಾಯಚೂರು ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸಭೆಯ ಸರ್ವಾನುಮತದ ನಿರ್ಣಯದ ಮೂಲಕ ಆಯ್ಕೆ ಮಾಡಲಾಗಿದ್ದು, ಕೆ.ಪಿ. ಅನಿಲ್ ಕುಮಾರ್ ಅವರನ್ನು ನಗರ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸಮೀಪವಿರುವ ನೃಪತುಂಗ ಹೋಟೆಲ್ ಸಭಾಂಗಣದಲ್ಲಿ ಅಕ್ಟೋಬರ್ 8ರಂದು ಕರ್ನಾಟಕ ಮಾದಿಗ (ಮಾದರ) ಮಹಾಸಭಾದ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ, ಮಾದಿಗ ಸಮುದಾಯದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಂಘಟಿತ ಪ್ರಯತ್ನಗಳು ಅಗತ್ಯವಾಗಿವೆ. ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆದ ಒಳಮೀಸಲಾತಿ ಹೋರಾಟದ ಫಲವನ್ನು ಮುಂದಿನ ಪೀಳಿಗೆಯ ಭವಿಷ್ಯ ರೂಪಿಸಲು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಪ್ರತಿಯೊಬ್ಬರೂ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಒಳಮೀಸಲಾತಿಯ ಸೌಲಭ್ಯಗಳನ್ನು ಸಮುದಾಯದ ಅರ್ಹ ಫಲಾನುಭವಿಗಳಿಗೆ ತಲುಪಿಸುವುದರ ಜೊತೆಗೆ ಯುವಜನರನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಜ್ಜುಗೊಳಿಸುವುದು ಮಹಾಸಭಾದ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ತರಬೇತಿ ಕೇಂದ್ರ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಅಧ್ಯಯನ ಕೇಂದ್ರ, ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಗ್ರಂಥಾಲಯ ಹಾಗೂ ವಾಚನಾಲಯ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಮಾದಿಗ ಸಮುದಾಯದ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ವಸ್ತುಸಂಗ್ರಹಾಲಯ ಸ್ಥಾಪಿಸುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಸತಿ ಮತ್ತು ಶೈಕ್ಷಣಿಕ ನೆರವು ಒದಗಿಸುವುದು, ಉದ್ಯೋಗ ಹಾಗೂ ಸ್ವಯಂ ಉದ್ಯೋಗ ಅವಕಾಶಗಳ ಕುರಿತು ಮಾರ್ಗದರ್ಶನ ನೀಡುವುದು ಮಹಾಸಭಾದ ಮುಂದಿನ ಗುರಿಗಳಾಗಿವೆ ಎಂದರು.
ಇದರೊಂದಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು, ಮದ್ಯವ್ಯಸನ ಮುಕ್ತಿ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಸಮುದಾಯದ ಸಭೆ, ಸಮಾವೇಶ, ತರಬೇತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮುದಾಯದ ಪ್ರತಿಯೊಬ್ಬರೂ ಮಹಾಸಭೆಯ ಸದಸ್ಯತ್ವ ಪಡೆದು ಸಂಘಟನೆಯನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ರಾಯಚೂರು ನಗರ ಘಟಕದ ಅಧ್ಯಕ್ಷರಾಗಿ ಕೆ.ಪಿ. ಅನಿಲ್ ಕುಮಾರ್, ಉಪಾಧ್ಯಕ್ಷರಾಗಿ ರಾಜು, ಕಾರ್ಯದರ್ಶಿಯಾಗಿ ಚಂದ್ರಶೇಖರ್ ಯಕ್ಲಾಸಪೂರ ಹಾಗೂ ಖಜಾಂಚಿಯಾಗಿ ಪಿ. ಅಮರೇಶ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈರಣ್ಣ ಭಂಡಾರಿ, ಭೀಮಣ್ಣ ಮಂಚಾಲ, ತಿಮ್ಮಪ್ಪ ಫಿರಂಗಿ ರಾಂಪೂರ, ನರಸರೆಡ್ಡಿ ಯರಮರಸ್ ಹಾಗೂ ಭೀಮಣ್ಣ ಹೊಸೂರು ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ವೆಂಕಟಸ್ವಾಮಿ ಆರ್. ತಿಮ್ಮಯ್ಯ, ಸುಧಾಮ, ರಾಜಶ್ರೀನಿವಾಸ, ಸುಂದರರಾಜ ಹಾಗೂ ಸುಭಾಷ ಅಸ್ಕಿಹಾಳ ಅವರನ್ನು ನೇಮಿಸಲಾಯಿತು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ, ಸಮಾಜದ ಹಿರಿಯ ಮುಖಂಡರಾದ ಜಯಣ್ಣ, ಎಚ್.ಬಿ. ಮುರಾರಿ, ಕಿರಿಲಿಂಗಪ್ಪ, ನರಸಿಂಹಲು ಮಾಡಗಿರಿ, ರವೀಂದ್ರ ಜಲ್ದಾರ್, ಪಿ. ಯಲ್ಲಪ್ಪ, ತಿಮ್ಮಪ್ಪ ಫಿರಂಗಿ, ಭೀಮಣ್ಣ ಮಂಚಾಲಿ, ಈರಣ್ಣ ಭಂಡಾರಿ, ಯಮುನಪ್ಪ ಗಿರಿಜಾಲಿ, ಆಂಜನೇಯ ಕುರುಬುದೊಡ್ಡಿ, ನಾಗರಾಜ ಖಾನಾಪುರ, ಜೆ. ಅಂಜನ್ ಕುಮಾರ್, ಜನಾರ್ಧನ್ ಅರಳಿಬೆಂಚಿ, ಚಂದ್ರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ಹೋರಾಟಗಾರರು, ನೌಕರರು, ನಿವೃತ್ತ ನೌಕರರು ಹಾಗೂ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಸಮುದಾಯದ ಸಂಘಟನೆಯನ್ನು ನಗರ ಮಟ್ಟದಿಂದ ಮತ್ತಷ್ಟು ಬಲಪಡಿಸುವುದು ಹಾಗೂ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲಾಯಿತು.



