ರಾಯಚೂರು, ಅ.10: ದೇವದುರ್ಗ ತಾಲೂಕಿನ ಅಡಕಲಗುಡ್ಡ ಗ್ರಾಮದ 15 ವರ್ಷದ ಬಾಲಕ ಶಂಕರಗೌಡ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚಿ ನ್ಯಾಯ ಒದಗಿಸಬೇಕೆಂದು ಮೃತ ಬಾಲಕನ ತಾಯಿ ಉಮಾದೇವಿ ಒತ್ತಾಯಿಸಿದ್ದಾರೆ. ಪ್ರಕರಣ ನಡೆದು ಹತ್ತು ತಿಂಗಳು ಕಳೆದರೂ ಸಮರ್ಪಕ ತನಿಖೆ ನಡೆದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ನ್ಯಾಯ ದೊರಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ಡಿಸೆಂಬರ್ 2ರಂದು ತಮ್ಮ ಮಗ ಶಂಕರಗೌಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಮಗ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆ ಎದುರಿಸುತ್ತಿರಲಿಲ್ಲ. ಹೀಗಾಗಿ ಆತನ ಸಾವಿನ ಹಿಂದೆ ಬೇರೆ ಕಾರಣಗಳಿರುವ ಸಾಧ್ಯತೆಯಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಕುಟುಂಬದ ಆಸ್ತಿ ವಿಚಾರವೇ ಮಗನ ಸಾವಿಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ತಮ್ಮ ಸಂಬಂಧಿಕರಾದ ಮಂಜುನಾಥ, ಶಂಕರ್, ಹೊಸಮನಿ ಮಲ್ಲಪ್ಪ ಹಾಗೂ ಅವರ ಸಹೋದರರ ಪಾತ್ರದ ಬಗ್ಗೆ ಶಂಕೆಯಿದೆ ಎಂದು ಆರೋಪಿಸಿದರು. ಆಸ್ತಿ ತಮ್ಮ ವಶಕ್ಕೆ ಪಡೆಯುವ ಉದ್ದೇಶದಿಂದ ಮಗನನ್ನು ಕೊಲೆ ಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಎಲ್ಲ ಅನುಮಾನಗಳನ್ನು ತನಿಖೆಯ ಮೂಲಕ ನಿವಾರಿಸಬೇಕೆಂದು ಆಗ್ರಹಿಸಿದರು.

ಘಟನೆಯ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ, ಪೊಲೀಸರು ಅಸಹಜ ಸಾವು ಪ್ರಕರಣ (ಯುಡಿಆರ್) ದಾಖಲಿಸುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ. ತಮ್ಮ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ಕೈಗೊಂಡಿಲ್ಲ ಎಂದು ದೂರಿದರು.

ದೇವದುರ್ಗ ಕ್ಷೇತ್ರದ ಶಾಸಕಿ ಕರೆಮ್ಮ ಜಿ. ನಾಯಕ ಹಾಗೂ ಕೆಲವು ಸ್ಥಳೀಯ ಪ್ರಭಾವಿ ಮುಖಂಡರ ಬೆಂಬಲ ಶಂಕಿತರಿಗೆ ಇರುವುದರಿಂದ ಪ್ರಕರಣದ ತನಿಖೆ ನಿರೀಕ್ಷಿತ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ಅನುಮಾನವಿದೆ ಎಂದು ಉಮಾದೇವಿ ಆರೋಪಿಸಿದರು. ರಾಜಕೀಯ ಪ್ರಭಾವದಿಂದ ತನಿಖೆಗೆ ಅಡ್ಡಿಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಬಡ ಕುಟುಂಬದವರ ದೂರುಗಳಿಗೂ ಪೊಲೀಸರು ಸಮಾನ ಆದ್ಯತೆ ನೀಡಬೇಕು. ಸೂಕ್ತ ತನಿಖೆ ಪೂರ್ಣಗೊಳ್ಳುವ ಮೊದಲೇ ಯಾರೂ ತಪ್ಪಿತಸ್ಥರಲ್ಲ ಎಂಬ ನಿರ್ಧಾರಕ್ಕೆ ಬರುವುದು ಹೇಗೆ ಎಂದು ಪ್ರಶ್ನಿಸಿದರು. ಈ ಆರೋಪಗಳ ಬಗ್ಗೆ ಸಂಬಂಧಪಟ್ಟವರ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಕುಟುಂಬದ ಸಂಕಷ್ಟವನ್ನು ವಿವರಿಸಿದ ಅವರು, ತಮ್ಮ ಪತಿ ಈ ಹಿಂದೆಯೇ ಮೃತಪಟ್ಟಿದ್ದು, ಮಗಳು ಅಂಗವೈಕಲ್ಯದಿಂದ ಬಳಲುತ್ತಿದ್ದಾಳೆ. ಮನೆಯ ಕೃಷಿ ಚಟುವಟಿಕೆಗಳನ್ನು ಮಗ ಶಂಕರಗೌಡನೇ ನಿರ್ವಹಿಸುತ್ತಿದ್ದ. ಆತನ ಅಕಾಲಿಕ ಸಾವಿನಿಂದ ಕುಟುಂಬ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿಯೂ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮತ್ತು ಸರ್ಕಾರಿ ಕಚೇರಿಗಳಿಗೆ ನಿರಂತರವಾಗಿ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಣ್ಣೀರಿಟ್ಟರು.

ಪ್ರಕರಣದ ತನಿಖೆಯ ಭಾಗವಾಗಿ ಶಂಕರಗೌಡನ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಮರುಪರಿಶೀಲನೆ ನಡೆಸಲಾಗಿದ್ದು, ದೇಹದ ಅಂಗಾಂಶಗಳು ಮತ್ತು ಮಣ್ಣಿನ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದರೆ, ಪ್ರಯೋಗಾಲಯದ ಪರೀಕ್ಷಾ ವರದಿಯ ಬಗ್ಗೆ ಇದುವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ವೈಜ್ಞಾನಿಕ ಪರೀಕ್ಷೆಯ ಫಲಿತಾಂಶ ತಿಳಿಯದಿರುವುದರಿಂದ ಸಾವಿನ ಕುರಿತು ಕುಟುಂಬದಲ್ಲಿರುವ ಅನುಮಾನಗಳು ಮತ್ತಷ್ಟು ಹೆಚ್ಚಾಗಿವೆ ಎಂದು ತಿಳಿಸಿದರು.

ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ನೇತೃತ್ವದ ತನಿಖೆಯ ಬಗ್ಗೆ ತಮಗೆ ವಿಶ್ವಾಸವಿಲ್ಲ. ಆದ್ದರಿಂದ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಗೆ ವಹಿಸಿ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಶೀಘ್ರ ಪಡೆದು ಪರಿಶೀಲಿಸುವುದರ ಜೊತೆಗೆ ಸಂಬಂಧಪಟ್ಟವರ ಮೊಬೈಲ್ ಕರೆಗಳ ವಿವರಗಳು (ಸಿಡಿಆರ್), ತಾಂತ್ರಿಕ ದಾಖಲೆಗಳು ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.

ಮಗನ ಸಾವು ಆತ್ಮಹತ್ಯೆಯೇ ಅಥವಾ ಅದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ವೈಜ್ಞಾನಿಕ ತನಿಖೆಯಿಂದ ಸ್ಪಷ್ಟಪಡಿಸಬೇಕು. ಪ್ರಕರಣದಲ್ಲಿ ಯಾರದ್ದೇ ತಪ್ಪು ಸಾಬೀತಾದರೂ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಸರ್ಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಉಮಾದೇವಿ ಮನವಿ ಮಾಡಿದರು.

‘ನನ್ನ ಮಗನ ಸಾವಿನ ಸತ್ಯ ಹೊರಬರುವವರೆಗೂ ಹೋರಾಟ ನಿಲ್ಲದು’

“ಹತ್ತು ತಿಂಗಳಿಂದ ಮಗನ ಸಾವಿಗೆ ನಿಖರ ಕಾರಣವೇನೆಂದು ತಿಳಿಯಲು ಅಧಿಕಾರಿಗಳ ಬಳಿ ಅಲೆದಾಡುತ್ತಿದ್ದೇನೆ. ನಮ್ಮಂತಹ ಬಡವರ ನೋವನ್ನು ಕೇಳುವವರು ಯಾರು? ಮಗನನ್ನು ಕಳೆದುಕೊಂಡ ದುಃಖದ ನಡುವೆ ನ್ಯಾಯಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ನನ್ನ ಮಗನ ಸಾವಿನ ಹಿಂದಿರುವ ಸತ್ಯ ಹೊರಬಂದು ನ್ಯಾಯ ದೊರೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ” ಎಂದು ಉಮಾದೇವಿ ಅಳಲು ತೋಡಿಕೊಂಡರು.