ರಾಯಚೂರು, ಅ.10: ನಗರದ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಕಚೇರಿಯ ಮೇಲ್ಭಾಗದಲ್ಲಿರುವ ಹುಣಸೆ ಮರಕ್ಕೆ ವಾಮಾಚಾರ ನಡೆಸಿರುವ ಶಂಕೆ ಮೂಡಿಸುವ ರೀತಿಯಲ್ಲಿ ಗೊಂಬೆಯೊಂದನ್ನು ಕಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಕಚೇರಿ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಾಮಗಾರಿಗಳ ಬಿಲ್ ಪಾವತಿ ವಿಳಂಬದಿಂದ ಅಸಮಾಧಾನಗೊಂಡಿರುವ ಗುತ್ತಿಗೆದಾರರು ಈ ಕೃತ್ಯ ಎಸಗಿರಬಹುದೇ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಪ್ರಕರಣ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಯಚೂರು ನಗರ ಹಾಗೂ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಮಹೇಶ್ ಕುಮಾರ್ ಅವರ ಕಚೇರಿಯ ಮೇಲ್ಭಾಗದಲ್ಲಿರುವ ಹುಣಸೆ ಮರಕ್ಕೆ ಗಂಡಿನ ಆಕೃತಿಯ ಗೊಂಬೆಯನ್ನು ಕಟ್ಟಿರುವುದು ಪತ್ತೆಯಾಗಿದೆ. ಗೊಂಬೆಗೆ ಅರಿಶಿಣ, ಕುಂಕುಮ ಹಾಗೂ ವಿಭೂತಿ ಹಚ್ಚಿ, ಕಪ್ಪು ದಾರಗಳಿಂದ ಸುತ್ತಲಾಗಿದ್ದು, ಇದನ್ನು ವಾಮಾಚಾರದ ಉದ್ದೇಶದಿಂದ ಇರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕಚೇರಿಯ ಶೌಚಾಲಯಕ್ಕೆ ನೀರಿನ ಸರಬರಾಜು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನೀರಿನ ಟ್ಯಾಂಕ್ ಪರಿಶೀಲಿಸಲು ಮೇಲ್ಭಾಗಕ್ಕೆ ತೆರಳಿದ್ದ ಮಹಿಳಾ ಸಿಬ್ಬಂದಿಗೆ ಮರದಲ್ಲಿ ನೇತಾಡುತ್ತಿದ್ದ ಗೊಂಬೆ ಕಾಣಿಸಿದೆ. ವಿಚಿತ್ರ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದ ಗೊಂಬೆಯನ್ನು ಕಂಡು ಗಾಬರಿಗೊಂಡ ಅವರು, ತಕ್ಷಣವೇ ಇತರ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಈ ವಿಚಾರವನ್ನು ಎಇಇ ಮಹೇಶ್ ಕುಮಾರ್ ಅವರ ಗಮನಕ್ಕೆ ತರಲಾಗಿದೆ.

ವಿಷಯ ತಿಳಿದ ಮಹೇಶ್ ಕುಮಾರ್ ಅವರು ಗೊಂಬೆಯನ್ನು ತೆರವುಗೊಳಿಸಿ ನಾಶಪಡಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಂತೆ ಸಿಬ್ಬಂದಿ ಗೊಂಬೆಯನ್ನು ಮರದಿಂದ ತೆಗೆದು ಕಚೇರಿಯ ಮೇಲ್ಭಾಗದಲ್ಲಿಯೇ ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾರೆ. ಈ ಪ್ರಕ್ರಿಯೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಹಾಗೂ ಛಾಯಾಚಿತ್ರಗಳ ಮೂಲಕ ದಾಖಲಿಸಿಕೊಂಡಿದ್ದಾರೆ.

ಇನ್ನು ಕಚೇರಿ ಆವರಣಕ್ಕೆ ಪ್ರವೇಶಿಸಿ ಗೊಂಬೆಯನ್ನು ಮರಕ್ಕೆ ಕಟ್ಟಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಎರಡು ದಿನಗಳ ಕಾಲ ದೃಶ್ಯಾವಳಿಗಳನ್ನು ತಪಾಸಣೆ ನಡೆಸಿದರೂ ಕೃತ್ಯ ಎಸಗಿದವರ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಇದರಿಂದ ಸಿಬ್ಬಂದಿಯಲ್ಲಿನ ಅನುಮಾನ ಹಾಗೂ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಮತ್ತೊಂದೆಡೆ, ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಬಿಲ್ ಮೊತ್ತ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಕೆಲವರು ಕಚೇರಿಗೆ ಪದೇಪದೇ ಅಲೆದಾಡುತ್ತಿದ್ದಾರೆ ಎನ್ನಲಾಗಿದೆ. ಹಣ ಬಿಡುಗಡೆ ವಿಳಂಬದಿಂದ ಅಸಮಾಧಾನಗೊಂಡವರೇ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಅಥವಾ ಭಯ ಹುಟ್ಟಿಸುವ ಉದ್ದೇಶದಿಂದ ಇಂತಹ ಕೃತ್ಯ ನಡೆಸಿರಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ, ಈ ಅನುಮಾನಕ್ಕೆ ಪೂರಕವಾದ ಯಾವುದೇ ಖಚಿತ ಸಾಕ್ಷ್ಯಗಳು ಇದುವರೆಗೆ ಲಭ್ಯವಾಗಿಲ್ಲ.

ಸರ್ಕಾರಿ ಕಚೇರಿಯ ಆವರಣದಲ್ಲಿಯೇ ಇಂತಹ ನಿಗೂಢ ಗೊಂಬೆ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಯಾರಾದರೂ ಉದ್ದೇಶಪೂರ್ವಕವಾಗಿ ಭಯ ಸೃಷ್ಟಿಸಲು ನಡೆಸಿದ ಕೃತ್ಯವೇ ಅಥವಾ ಸಿಬ್ಬಂದಿಯನ್ನು ಗೊಂದಲಕ್ಕೀಡುಮಾಡುವ ಪ್ರಯತ್ನವೇ ಎಂಬುದು ಸ್ಪಷ್ಟವಾಗಿಲ್ಲ.

ಘಟನೆಯ ಕುರಿತು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಹಾಗೂ ನಗರದ ಇತರ ಸರ್ಕಾರಿ ಕಚೇರಿಗಳಲ್ಲಿಯೂ ವ್ಯಾಪಕ ಚರ್ಚೆ ನಡೆಯುತ್ತಿದೆ. ಗೊಂಬೆಯನ್ನು ಕಟ್ಟಿದವರ ಗುರುತು ಮತ್ತು ಅದರ ಹಿಂದಿನ ನೈಜ ಉದ್ದೇಶ ಪತ್ತೆಯಾದಾಗ ಮಾತ್ರ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ.