ರಾಯಚೂರು, ಅ.10: ಮಸ್ಕಿಯಲ್ಲಿ ಅಕ್ಟೋಬರ್ 6ರಂದು ಆಯೋಜಿಸಲಾಗಿದ್ದ 14 ವರ್ಷದೊಳಗಿನವರ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ರಾಮತ್ನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಭಾಗ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಪಂದ್ಯಾವಳಿಯಲ್ಲಿ ತಂಡದ ಆಟಗಾರರು ಸಂಘಟಿತ ಹೋರಾಟ, ಚುರುಕಿನ ಆಟ ಹಾಗೂ ಉತ್ತಮ ಕ್ರೀಡಾ ಕೌಶಲ ಪ್ರದರ್ಶಿಸಿ ಗಮನ ಸೆಳೆದರು. ವಿಶೇಷವಾಗಿ ತಂಡದ ನಾಯಕ ಮನೋಜ್ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಶಾಲೆಯ ಮುಖ್ಯಗುರು ಶರಣಪ್ಪ, ಹಿರಿಯ ಶಿಕ್ಷಕ ಅಯ್ಯಪ್ಪ ಹಾಗೂ ತಂಡಕ್ಕೆ ತರಬೇತಿ ನೀಡಿದ ಅತಿಥಿ ಶಿಕ್ಷಕರಾದ ಬಸವಲಿಂಗಯ್ಯ (ಅಜಿತ್), ಹನುಮೇಶ ಮರಕಮದಿನ್ನಿ, ದೇವರಾಜ್, ಮಹೇಶ, ಮಹಾಂತೇಶ ಗೊರ್ಕಲ್, ಮೌನೇಶ ಮರಕಮದಿನ್ನಿ, ಕರಿಯಪ್ಪ ಶಿಳ್ಳೆಕ್ಯಾತರು ಮತ್ತು ಬಸವಲಿಂಗಪ್ಪ ದೇಸಾಯಿ ಅವರ ಮಾರ್ಗದರ್ಶನ ಹಾಗೂ ಪರಿಶ್ರಮವಿದೆ.
ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಅಮರೇಶ ಶಿಳ್ಳೆಕ್ಯಾತರು, ವಿಜೇತ ತಂಡದ ಆಟಗಾರರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿ ಪ್ರೋತ್ಸಾಹಿಸಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವುದು ಗ್ರಾಮಕ್ಕೆ ಹೆಮ್ಮೆ ತಂದಿದೆ. ವಿದ್ಯಾರ್ಥಿಗಳ ಸಾಧನೆಗೆ ಗ್ರಾಮದ ಕ್ರೀಡಾಪ್ರೇಮಿಗಳು, ಗುರುಹಿರಿಯರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಶಾಲೆ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.



