ರಾಯಚೂರು, ಅ.12: ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸುವ ಮೊದಲು ಹಿಂದುಳಿದ ವರ್ಗಗಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ 1995ರ ಸರ್ಕಾರದ ಅಧಿಸೂಚನೆಯನ್ನು ಪರಿಷ್ಕರಿಸಬೇಕು. ಅಲ್ಲದೆ, ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಏಕರೂಪದ ಚುನಾವಣಾ ನೀತಿ ಜಾರಿಗೊಳಿಸಿ, ಸ್ಥಳೀಯ ಸ್ವಯಂ ಆಡಳಿತದ ಮೂಲ ಆಶಯವನ್ನು ಕಾಪಾಡಬೇಕು ಎಂದು ಹಿಂದುಳಿದ ವರ್ಗಗಳ ಮುಖಂಡ ಅಂಬಾಜೀರಾವ್ ಮೈದರ್‌ಕರ್ ಹಾಗೂ ಕರ್ನಾಟಕ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದ ಭಾಗ-4ರ ಅನುಚ್ಛೇದ 40ರ ಪ್ರಕಾರ ಗ್ರಾಮ ಪಂಚಾಯಿತಿಗಳನ್ನು ಸ್ವಯಂ ಆಡಳಿತ ಘಟಕಗಳಾಗಿ ಸಂಘಟಿಸಿ, ಅವುಗಳ ಕಾರ್ಯನಿರ್ವಹಣೆಗೆ ಅಗತ್ಯ ಅಧಿಕಾರ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಸಂವಿಧಾನದ 243-ಬಿ ವಿಧಿಯು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ್ದು, ಅದರಂತೆ ಕರ್ನಾಟಕ ಸರ್ಕಾರವು 1993ರಲ್ಲಿ ಪಂಚಾಯತ್ ರಾಜ್ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ವಿವರಿಸಿದರು.

ಕರ್ನಾಟಕ ಹೈಕೋರ್ಟ್ 2002ರ ವಸಂತಕುಮಾರ ಶೆಟ್ಟಿ ಪ್ರಕರಣದಲ್ಲಿಯೂ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ಉಲ್ಲೇಖಿಸಿದೆ. ಆದರೆ, ಗ್ರಾಮ ಪಂಚಾಯತ್ ಚುನಾವಣೆಗಳನ್ನು ರಾಜಕೀಯ ಪಕ್ಷಗಳ ರಹಿತವಾಗಿ ನಡೆಸುವ ವ್ಯವಸ್ಥೆ ಇದ್ದರೂ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಪಕ್ಷಾಧಾರಿತವಾಗಿ ನಡೆಸುತ್ತಿರುವುದು ಸ್ಥಳೀಯ ಸ್ವಯಂ ಆಡಳಿತದ ಆಶಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಪರಿಚ್ಛೇದ 7(2)ರ ಪ್ರಕಾರ ಗ್ರಾಮ ಪಂಚಾಯತ್ ಚುನಾವಣೆಗಳನ್ನು ರಾಜಕೀಯ ಪಕ್ಷಗಳ ರಹಿತವಾಗಿ ನಡೆಸಬೇಕು. ಆದರೆ, ಪರಿಚ್ಛೇದ 130(2) ಮತ್ತು 169(2)ರ ಪ್ರಕಾರ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಬ್ಯಾಲೆಟ್ ಅಥವಾ ಇವಿಎಂ ಮೂಲಕ ನಡೆಸುವ ವ್ಯವಸ್ಥೆ ಇದೆ. ಈ ನಿಬಂಧನೆಗಳನ್ನು ಆಧರಿಸಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಭಾಗವಹಿಸುವಿಕೆಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಅಲ್ಲದೆ, ಗ್ರಾಮ ಪಂಚಾಯತ್ ಸದಸ್ಯರಾಗಲು ಅನ್ವಯಿಸುವ ಅರ್ಹತೆ ಮತ್ತು ಅನರ್ಹತೆಗಳಿಗೆ ಸಂಬಂಧಿಸಿದ ಪರಿಚ್ಛೇದ 26ರಿಂದ 40ರವರೆಗಿನ ನಿಯಮಗಳನ್ನೇ ತಾಲೂಕು ಪಂಚಾಯತ್‌ಗೆ ಪರಿಚ್ಛೇದ 132(3) ಹಾಗೂ ಜಿಲ್ಲಾ ಪಂಚಾಯತ್‌ಗೆ ಪರಿಚ್ಛೇದ 169(3)ರ ಮೂಲಕ ಅನ್ವಯಿಸಲಾಗಿದೆ. ಹೀಗಿರುವಾಗ ಚುನಾವಣಾ ವ್ಯವಸ್ಥೆಯಲ್ಲಿಯೂ ಏಕರೂಪತೆ ಇರಬೇಕು ಎಂದು ಪ್ರತಿಪಾದಿಸಿದರು.

ರಾಜಕೀಯ ಪಕ್ಷಗಳ ಬಿ-ಫಾರಂ ಪಡೆದು ಆಯ್ಕೆಯಾಗುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ಗ್ರಾಮೀಣ ಜನರ ಹಿತಾಸಕ್ತಿಗಿಂತ ಪಕ್ಷದ ನಿರ್ಧಾರಗಳಿಗೆ ಬದ್ಧರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿಯೂ ಪಕ್ಷದ ಮುಖಂಡರ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಪಕ್ಷದ ವಿಪ್ ಉಲ್ಲಂಘಿಸಿದರೆ ಶಿಸ್ತುಕ್ರಮ ಎದುರಿಸುವ ಸಾಧ್ಯತೆ ಇರುವುದರಿಂದ ಸದಸ್ಯರ ಸ್ವತಂತ್ರ ನಿರ್ಧಾರಕ್ಕೆ ಅಡ್ಡಿಯಾಗುತ್ತದೆ. ಇದು ಸಂವಿಧಾನದ ಅನುಚ್ಛೇದ 19(1)(ಎ)ರಡಿ ದೊರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯದ ಆಶಯಕ್ಕೂ ಧಕ್ಕೆ ತರುತ್ತದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವ ಉದ್ದೇಶದಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಪಕ್ಷಾಧಾರಿತವಾಗಿ ನಡೆಸುತ್ತಿವೆ. ಇದರಿಂದ ಗ್ರಾಮೀಣ ಅಭಿವೃದ್ಧಿ ಹಾಗೂ ಜನಪರ ಆಡಳಿತಕ್ಕಿಂತ ಪಕ್ಷ ರಾಜಕಾರಣಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ 1995ರ ಜನವರಿ 13ರಂದು ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ RDP5ZPS95(i) ಅನ್ನು ಪ್ರಸ್ತುತ ಜಾತಿ ವರ್ಗೀಕರಣಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಬೇಕಾಗಿದೆ. ಪ್ರವರ್ಗ-ಎ ಪಟ್ಟಿಯಲ್ಲಿದ್ದ ಮೇದರ, ಮೇದರಿ, ಗೌರಿಗ, ಬುರುಡ್, ಪರಿವಾರ ಹಾಗೂ ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಮತ್ತು ಕಲ್ಲು ವಡ್ಡರ್, ಮಣ್ಣು ವಡ್ಡರ್ ಹಾಗೂ ಬೋಯಿ (ಬೇಸ್ತರಲ್ಲದ) ಸಮುದಾಯಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ ಎಂದು ಅವರು ಪ್ರತಿಪಾದಿಸಿದರು. ಈ ಬದಲಾವಣೆಗಳನ್ನು ಪರಿಗಣಿಸದೆ ಹಳೆಯ ಅಧಿಸೂಚನೆಯ ಆಧಾರದಲ್ಲಿ ಚುನಾವಣೆ ನಡೆಸುವುದು ಸರಿಯಲ್ಲ ಎಂದು ಹೇಳಿದರು.

ರಾಯಚೂರು ತಾಲೂಕಿನ ಏಳು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-ಎ ಪಟ್ಟಿಯಲ್ಲಿರುವ ಕುರುಬ, ಬೆಸ್ತ, ಕಾಟಿಕ, ಉಪ್ಪಾರ, ಗೊಲ್ಲ, ಅಗಸ, ಈಡಿಗ, ಕುಂಬಾರ, ಹೂಗಾರ, ಹಡಪದ, ವಿಶ್ವಕರ್ಮ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿ ಮೂಲದ ಸಮುದಾಯಗಳಿಗೆ ಮತ್ತು ಪ್ರವರ್ಗ-ಬಿ ಪಟ್ಟಿಯಲ್ಲಿರುವ ಮುನ್ನೂರು ಕಾಪು, ಲಿಂಗಾಯತ, ಮರಾಠ ಹಾಗೂ ಕ್ರೈಸ್ತ ಸಮುದಾಯಗಳಿಗೆ ಮೀಸಲಾತಿ ಏಕೆ ದೊರೆತಿಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯದಿರುವ ಕುರಿತು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಉತ್ತರ ನೀಡಬೇಕು. ಹಿಂದುಳಿದ ವರ್ಗಗಳ ಎಲ್ಲ ಸಮುದಾಯಗಳಿಗೂ ನ್ಯಾಯಸಮ್ಮತ ಪ್ರಾತಿನಿಧ್ಯ ದೊರೆಯುವಂತೆ ಮೀಸಲಾತಿ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು. ರಾಜ್ಯ ಸರ್ಕಾರವು ಸಂಬಂಧಿಸಿದ ಅಧಿಸೂಚನೆಯನ್ನು ತಿದ್ದುಪಡಿ ಮಾಡಿದ ನಂತರವೇ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಸಮುದಾಯದ ಮುಖಂಡ ಜೆ. ವೀರಭದ್ರಸ್ವಾಮಿ, ಮಾಲ ಸಮುದಾಯದ ಮುಖಂಡ ಶ್ರೀಕಾಂತ್ ಕಲ್ಲೂರ್, ಮರಾಠ ಸಮುದಾಯದ ಮುಖಂಡ ರಘು ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಮಸೂದ್ ಅಲಿ ಉಪಸ್ಥಿತರಿದ್ದರು.