ರಾಯಚೂರು, ಅ.12: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಣಿಪುರದ ಕಾಂಗ್ರೆಸ್ ಲೋಕಸಭಾ ಸಂಸದ ಡಾ. ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಅವರನ್ನು ಬಂಧಿಸಿ, ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಜಮಾಯಿಸಿದ ಬಿಜೆಪಿ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಂಸದ ಬಿಮೋಲ್ ಅಕೋಯಿಜಮ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆಯುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅನಿತಾ ನವಲಕಲ್ ಮಾತನಾಡಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪಗಳು ಸಂಸದನ ವಿರುದ್ಧ ಕೇಳಿಬಂದಿವೆ. ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಯಿಂದ ವಜಾಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಆರೋಪಿತ ಸಂಸದನ ವಿರುದ್ಧ ಕ್ರಮ ಕೈಗೊಂಡು ತನಿಖೆಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರ ಸುರಕ್ಷತೆ, ಗೌರವ ಮತ್ತು ಹಕ್ಕುಗಳ ಕುರಿತು ಮಾತನಾಡುವ ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಆರೋಪ ಎದುರಿಸುತ್ತಿರುವ ಸಂಸದರನ್ನು ಪಕ್ಷದಿಂದ ಅಮಾನತುಗೊಳಿಸಬೇಕು. ಅವರು ನೈತಿಕ ಹೊಣೆ ಹೊತ್ತು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳದ ಆರೋಪಗಳನ್ನು ರಾಜಕೀಯ ದೃಷ್ಟಿಯಿಂದ ನೋಡದೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಿ, ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮುಖಂಡರಾದ ವಿಜಯರಾಜೇಶ್ವರಿ ಗೋಪಿ ಶೆಟ್ಟಿ, ಸಹನಾ ಹಿರೇಮಠ, ಸುಮಲತಾ, ಸುಮಾ ಗಸ್ತಿ, ಸೀತಾ ನಾಯಕ್, ನಾಗರತ್ನ, ಪುಷ್ಪ, ಅಶ್ವಿನಿ, ಆದಿಲಕ್ಷ್ಮಿ ಹಾಗೂ ಮುಖಂಡರಾದ ರವೀಂದ್ರ ಜಲ್ದಾರ್, ನಾಗರಾಜ್ ಬಲ್ಕಿ, ಶಶಿರಾಜ್ ಕೃಷ್ಣಮೂರ್ತಿ, ನರಸಿಂಹ, ಮೌನೇಶ್, ನಾರಾಯಣರಾವ್ ಕುಲಕರ್ಣಿ, ನಾಗರಾಜ್ ಪಲಗಲು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.



