ರಾಯಚೂರು, ಅ.12: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಕಾರ್ಯಕರ್ತರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದ ಬಳಿ ಜೈಲ್ ಭರೋ ಚಳವಳಿ ನಡೆಸಿದರು.
ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಮತದಾನದ ಹಕ್ಕನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಕಾರ್ಯದರ್ಶಿ ಅಜೀಜ್ ಜಾಗೀರ್ದಾರ್, ಮತದಾರರ ಹೆಸರುಗಳನ್ನು ತೆಗೆದುಹಾಕುವುದು, ಮರುಸೇರ್ಪಡೆಗೆ ಅಡೆತಡೆ ಉಂಟುಮಾಡುವುದು ಹಾಗೂ ಆಕ್ಷೇಪಣೆ ಸಲ್ಲಿಸುವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಸಾಮಾನ್ಯ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ವಲಸೆ ಕಾರ್ಮಿಕರು ಸೇರಿದಂತೆ ಸಮಾಜದ ದುರ್ಬಲ ವರ್ಗದ ಜನರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಚುನಾವಣಾ ಆಯೋಗ ಎಚ್ಚರಿಕೆ ವಹಿಸಬೇಕು. ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, 2025ರ ಜನವರಿಯಲ್ಲಿದ್ದ ಮತದಾರರ ಪಟ್ಟಿಗಳನ್ನು ಮರುಸ್ಥಾಪಿಸಬೇಕು. ಪಟ್ಟಿಯಿಂದ ಕೈಬಿಡಲಾದ ಅರ್ಹ ಮತದಾರರ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಚುನಾವಣಾ ಆಯೋಗವು ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕಾಪಾಡಬೇಕು. ಮತದಾನದ ಹಕ್ಕಿನ ರಕ್ಷಣೆಗೆ ಸಾರ್ವಜನಿಕರು ಸಂಘಟಿತ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್, ಮುಖಂಡರಾದ ಜಿಲಾನಿ ಯರಗೇರಾ, ಆರ್.ಎಚ್. ಕಲ್ಮಗಿ, ಬಸವರಾಜ್ ಬೆಳಮುಗಿ, ಭೀಮಯ್ಯ, ಜಗದೀಶ್, ಹನೀಫ್ ಅಬಕಾರಿ, ಖಾದರ್, ವೀರೇಶ್, ಜೋಳಯ್ಯ, ನರಸಪ್ಪ, ಈರಣ್ಣ, ಯಲ್ಲಪ್ಪ, ಮಹೇಂದ್ರ, ಹನುಮಂತ ಸೇರಿದಂತೆ ಹಲವರು ಭಾಗವಹಿಸಿದ್ದರು.



