ರಾಯಚೂರು, ಅ.12: ವಿದ್ಯಾರ್ಥಿಗಳಲ್ಲಿ ಸಮಾಜಸೇವೆಯ ಮನೋಭಾವ, ಶಿಸ್ತು, ನಾಯಕತ್ವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಪ್ರಮುಖ ಪಾತ್ರ ವಹಿಸುತ್ತಿದ್ದು, ಯುವಜನರು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಗಣ್ಯರು ಅಭಿಪ್ರಾಯಪಟ್ಟರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಹೇರೂರು ಚಂದ್ರಾಯಗೌಡ ಮಲ್ಹಾರ ಸಿದ್ದಪ್ಪಗೌಡ ಕರೆಡ್ಡಿ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಸೋಮವಾರ ಮನ್ಸಲಾಪೂರ ಗ್ರಾಮದಲ್ಲಿ ಆಯೋಜಿಸಿದ್ದ 2025–26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನ್ಸಲಾಪೂರ ಸಿದ್ಧಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿದ್ದನಗೌಡ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷ ಹರವಿ ನಾಗನಗೌಡ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಉಪಾಧ್ಯಕ್ಷ ಹಾಗೂ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಅಶೋಕ್ ಪಾಟೀಲ್ ಅತ್ತನೂರು, ಎಚ್ಸಿಎಂಎಸ್ಕೆ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಕೆ. ಶರಣರೆಡ್ಡಿ ಪಾಟೀಲ, ಕಾರ್ಯದರ್ಶಿ ಆನಂದ್ ಪಾಟೀಲ್ ಅಸ್ಕಿಹಾಳ್ ಹಾಗೂ ಸದಸ್ಯ ಎಸ್.ಎಲ್. ಕೇಶವ ರೆಡ್ಡಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದ ಜೊತೆಗೆ ಸಮಾಜದ ವಾಸ್ತವ ಪರಿಸ್ಥಿತಿಗಳನ್ನು ತಿಳಿದುಕೊಳ್ಳಲು ಉತ್ತಮ ಅವಕಾಶ ಕಲ್ಪಿಸುತ್ತವೆ ಎಂದು ತಿಳಿಸಿದರು.
ಗ್ರಾಮೀಣ ಜನರ ಜೀವನಶೈಲಿ, ಸಮಸ್ಯೆಗಳು ಹಾಗೂ ಅಗತ್ಯಗಳನ್ನು ನೇರವಾಗಿ ಅರಿತುಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಯುತ್ತದೆ. ಇಂತಹ ಶಿಬಿರಗಳು ಯುವಜನರಲ್ಲಿ ಪರಸ್ಪರ ಸಹಕಾರ, ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ರಾಯಚೂರು ಎಪಿಎಂಸಿ ಉಪಾಧ್ಯಕ್ಷ ಶಶಿಧರ್ ಪಾಟೀಲ್ ಮೇಟಿ ಹಾಗೂ ಖಾಸಗಿ ಶಾಲೆಗಳ ಒಕ್ಕೂಟದ ಗೌರವಾಧ್ಯಕ್ಷ ಮತ್ತು ಮನ್ಸಲಾಪೂರ ನೇತಾಜಿ ಪ್ರೌಢಶಾಲೆಯ ಕಾರ್ಯದರ್ಶಿ ರವಿಕುಮಾರ ಮಾತನಾಡಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಯುವಜನರ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಪರ್ವತರೆಡ್ಡಿ ಮಾತನಾಡಿ, ಎನ್ಎಸ್ಎಸ್ ಶಿಬಿರದ ಮೂಲಕ ದೊರೆಯುವ ಅನುಭವ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಮಾರ್ಗದರ್ಶಿಯಾಗಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಶರಣ ಭೂಪಾಲ ನಾಡಗೌಡ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜದ ಅಭಿವೃದ್ಧಿಗೂ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯ ಆಶಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಹಾವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶರಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಉದ್ದೇಶಗಳನ್ನು ವಿವರಿಸಿದರು. ಉಪನ್ಯಾಸಕ ಈರಪ್ಪ ಸರ್ಜಾಪುರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ರೇಣುಕಾ, ಪದ್ಮ, ದೀಪಾ, ಅನ್ನಪೂರ್ಣ, ಗಂಗಾಧರ, ಅಜೇಯ ಕುಮಾರ ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.



