ರಾಯಚೂರು, ಅ.12: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಪೋಷಕತ್ವ ಯೋಜನೆಯಡಿ ಮಕ್ಕಳ ಪೋಷಣೆ ಹಾಗೂ ರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳಲು ಆಸಕ್ತಿ ಹೊಂದಿರುವ ಅರ್ಹ ಕುಟುಂಬಗಳು ಮತ್ತು ಸಂಭವನೀಯ ಸಾಕು ಪೋಷಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬಾಲನ್ಯಾಯ ಕಾಯ್ದೆ–2015ರ ಸೆಕ್ಷನ್ 44ರ ಅನ್ವಯ ಜಾರಿಯಲ್ಲಿರುವ ಪೋಷಕತ್ವ ಯೋಜನೆಯು 18 ವರ್ಷದೊಳಗಿನ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ಸುರಕ್ಷಿತ ಕೌಟುಂಬಿಕ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಿದೆ.
ವಿವಿಧ ಕಾರಣಗಳಿಂದ ತಮ್ಮ ಜೈವಿಕ ಕುಟುಂಬದೊಂದಿಗೆ ವಾಸಿಸಲು ಸಾಧ್ಯವಾಗದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಅರ್ಹ ಹಾಗೂ ಅನುಮೋದಿತ ಕುಟುಂಬಗಳ ಆರೈಕೆಗೆ ಒಪ್ಪಿಸುವ ವ್ಯವಸ್ಥೆಯೇ ಪೋಷಕತ್ವ ಯೋಜನೆಯಾಗಿದೆ.
ಈ ಯೋಜನೆಯಡಿ ಮಕ್ಕಳನ್ನು ತಾತ್ಕಾಲಿಕವಾಗಿ ಅಥವಾ ಅಗತ್ಯಕ್ಕೆ ಅನುಗುಣವಾಗಿ ವಿಸ್ತರಿತ ಅವಧಿಗೆ ಆಯ್ಕೆಯಾದ ಕುಟುಂಬಗಳ ಆರೈಕೆಯಲ್ಲಿ ಇರಿಸಲಾಗುತ್ತದೆ. ಮಕ್ಕಳಿಗೆ ಪ್ರೀತಿ, ಕಾಳಜಿ, ರಕ್ಷಣೆ ಹಾಗೂ ಉತ್ತಮ ಕೌಟುಂಬಿಕ ವಾತಾವರಣ ದೊರಕಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಪರಿಶೀಲನೆ ಹಾಗೂ ಆದೇಶದ ಮೇರೆಗೆ ಅರ್ಹ ಕುಟುಂಬಗಳನ್ನು ಆಯ್ಕೆ ಮಾಡಲಾಗುತ್ತದೆ. ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳ ಮೇಲ್ವಿಚಾರಣೆಯೂ ಇರಲಿದೆ.
ರಾಯಚೂರು ಜಿಲ್ಲೆಯಲ್ಲಿ ಮಕ್ಕಳಿಲ್ಲದ ದಂಪತಿಗಳು, ಏಕ ಪೋಷಕ ಕುಟುಂಬಗಳು ಹಾಗೂ ಮಕ್ಕಳ ಪೋಷಣೆ ಮತ್ತು ರಕ್ಷಣೆಯ ಜವಾಬ್ದಾರಿ ವಹಿಸಿಕೊಳ್ಳಲು ಆಸಕ್ತಿ ಹೊಂದಿರುವ ಅರ್ಹ ವ್ಯಕ್ತಿಗಳು ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮನೆ ಸಂಖ್ಯೆ 1-9-138, ಪಶ್ಚಿಮ ಪೊಲೀಸ್ ಠಾಣೆಯ ಹಿಂದೆ, ಮಾರಮ್ಮಗುಡಿ ಎದುರುಗಡೆ, ಗೋಲ್ ಮಾರ್ಕೆಟ್, ಆಜಾದ್ ನಗರ, ರಾಯಚೂರು–584101 ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕುರಿತು ತಿಳಿದುಕೊಳ್ಳಲು ದೂರವಾಣಿ ಸಂಖ್ಯೆಗಳಾದ 08532-226226, 8618362385, 9731603295 ಹಾಗೂ 8660627793 ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



