ರಾಯಚೂರು: ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಕನ್ನಡಿಗ (ರಿ) ಎಂಬ ನೂತನ ರಾಜ್ಯಮಟ್ಟದ ಸಂಘಟನೆಯನ್ನು ಸ್ಥಾಪಿಸಲಾಗಿದ್ದು, ರಾಜ್ಯಾದ್ಯಂತ ಸಂಘಟನೆಯನ್ನು ವಿಸ್ತರಿಸಿ ಕನ್ನಡಪರ ಹೋರಾಟಗಳನ್ನು ರೂಪಿಸಲಾಗುವುದು ಎಂದು ವೆಂಕಟೇಶ್ ಮಲ್ಲದೇವರ ಗುಡ್ಡ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಅವರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ನಡೆಸಲಾಗುವುದು ಎಂದರು.

ರಾಜ್ಯದ ಜಿಲ್ಲೆ, ತಾಲೂಕು, ಹೋಬಳಿ ಹಾಗೂ ಗ್ರಾಮಮಟ್ಟದಲ್ಲಿ ಸಂಘಟನೆಯ ಘಟಕಗಳನ್ನು ಸ್ಥಾಪಿಸಿ, ಜನರಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲಾಗುವುದು. ನವೆಂಬರ್‌ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಿಂಧನೂರು ನಗರದಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗುತ್ತಿವೆ. ನೀರಿನ ಮೂಲಗಳು ಬತ್ತುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೂ ತೀವ್ರ ಹಿನ್ನಡೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬೆಳೆ ನಷ್ಟದಿಂದಾಗಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಮರುಪಾವತಿಸಲು ರೈತರು ಪರದಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಆದಾಯದ ಕೊರತೆಯಿಂದ ಅನೇಕ ಕುಟುಂಬಗಳು ಜೀವನೋಪಾಯಕ್ಕಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಿ ₹5 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಕ್ಷ್ಮಣ ಭೋವಿ, ರಾಜ್ಯ ಗೌರವಾಧ್ಯಕ್ಷ ಮರಿಯಪ್ಪ ಬಂಡಿ, ಕಾರ್ಯಾಧ್ಯಕ್ಷ ದುರುಗೇಶ್ ಬಾಲಿ, ಉಪಾಧ್ಯಕ್ಷ ಖಾಜಾ ಹುಸೇನ್ ದಿದ್ದಿರಿ, ಖಜಾಂಚಿ ಮಂಜುನಾಥ್ ಪಾಟೀಲ್ ಹಟ್ಟಿ, ಯುವ ಘಟಕದ ಅಧ್ಯಕ್ಷ ಗ್ಯಾನಪ್ಪ ಸಿಂಧನೂರು, ಜಂಟಿ ಕಾರ್ಯದರ್ಶಿ ಅಲ್ಲಾಬಂದ್ ಸಾಬ್, ಸಂಘಟನಾ ಕಾರ್ಯದರ್ಶಿ ಮೀರಾಬಾಯಿ ರೌಡಕುಂದ, ಮಾಧ್ಯಮ ವಕ್ತಾರ ಬಸವರಾಜ ಬುಕ್ಕನಹಟ್ಟಿ, ಕಾನೂನು ಸಲಹೆಗಾರ ಕೆ. ಭೀಮನಗೌಡ, ಮೀರಾಬಾಯಿ ಹಾಗೂ ಶಶಿಕಲಾ ಭೀಮರಾಯ ಉಪಸ್ಥಿತರಿದ್ದರು.