ರಾಯಚೂರು, ಅ.13: ಹತ್ತಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯುವ ಜತೆಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಸಿ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಅಧಿಕ ಸಾಂದ್ರತೆಯ ನಾಟಿ ಪದ್ಧತಿ (HDPS) ಕುರಿತು ಕ್ಷೇತ್ರೋತ್ಸವ ಹಾಗೂ ರೈತರಿಗೆ ತಾಂತ್ರಿಕ ಮಾಹಿತಿ ನೀಡುವ ಕಾರ್ಯಕ್ರಮವನ್ನು ಮಂಗಳವಾರ ತಾಲೂಕಿನ ಕಸಬೆ ಕ್ಯಾಂಪ್ನ ಡಾ. ಶಂಕರಗೌಡ ಅವರ ಕೃಷಿ ಜಮೀನಿನಲ್ಲಿ ಆಯೋಜಿಸಲಾಗಿತ್ತು.
ಹತ್ತಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ, ಕಡಿಮೆ ಅವಧಿಯಲ್ಲಿ ಬೆಳೆ ನಿರ್ವಹಣೆ ಹಾಗೂ ಏಕಕಾಲಕ್ಕೆ ಹತ್ತಿ ಬಿಡಿಸಿ ಕೊಯ್ಲು ಮಾಡುವ ವಿನೂತನ ಪದ್ಧತಿಯ ಬಗ್ಗೆ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.
ರಾಸಿ ಮ್ಯಾಕ್ಸ್ 929 ಬಿ.ಟಿ. ಹೈಬ್ರಿಡ್ ಹತ್ತಿ ತಳಿಯನ್ನು ಅಧಿಕ ಸಾಂದ್ರತೆಯ ನಾಟಿ ಪದ್ಧತಿಯಲ್ಲಿ ಬೆಳೆಸುವ ಮೂಲಕ ಎಕರೆಗೆ ಸುಮಾರು 29 ಸಾವಿರ ಗಿಡಗಳನ್ನು ನಾಟಿ ಮಾಡಬಹುದಾಗಿದೆ. ಈ ವಿಧಾನದಲ್ಲಿ 120ರಿಂದ 140 ದಿನಗಳ ಅವಧಿಯಲ್ಲಿ ಬೆಳೆ ಕೊಯ್ಲಿಗೆ ಬರುವ ನಿರೀಕ್ಷೆಯಿದ್ದು, ಎಕರೆಗೆ 15ರಿಂದ 17 ಕ್ವಿಂಟಲ್ ಇಳುವರಿ ಪಡೆಯುವ ಗುರಿ ಹೊಂದಲಾಗಿದೆ ಎಂದು ಕಂಪನಿಯ ತಜ್ಞರು ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಗತಿಪರ ರೈತ ಹಾಗೂ ಉದ್ಯಮಿ ಸಿದ್ದನಗೌಡ ಗಾರಲದಿನ್ನಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ರೈತರು ಸಾಂಪ್ರದಾಯಿಕ ಕೃಷಿಯೊಂದಿಗೆ ಆಧುನಿಕ ವಿಧಾನಗಳನ್ನೂ ಅಳವಡಿಸಿಕೊಂಡು ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕು. ಅಧಿಕ ಸಾಂದ್ರತೆಯ ನಾಟಿ ಪದ್ಧತಿಯ ಪ್ರಯೋಜನಗಳನ್ನು ಅರಿತುಕೊಂಡು ಕೃಷಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ (IAT) ಅಧ್ಯಕ್ಷ ಡಾ. ಎ.ಬಿ. ಪಾಟೀಲ ಮಾತನಾಡಿ, ಹತ್ತಿ ಬೆಳೆಗಾರರು ಬದಲಾಗುತ್ತಿರುವ ಕೃಷಿ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಅಧಿಕ ಸಾಂದ್ರತೆಯ ನಾಟಿ ಪದ್ಧತಿ ಹತ್ತಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಧ್ಯತೆ ಹೊಂದಿದ್ದು, ರೈತರು ತಜ್ಞರ ಮಾರ್ಗದರ್ಶನ ಪಡೆದು ಇದರ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ರಾಯಚೂರು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ್ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಜಿಲ್ಲೆಗಳಲ್ಲಿ ರಾಯಚೂರು ಪ್ರಮುಖ ಸ್ಥಾನ ಹೊಂದಿದೆ. ಜಿಲ್ಲೆಯಲ್ಲಿ ಸುಮಾರು 2.28 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕ ಸಾಂದ್ರತೆಯ ನಾಟಿ ಪದ್ಧತಿ ಅಳವಡಿಸಿಕೊಳ್ಳುವುದರಿಂದ ರೈತರಿಗೆ ಹೆಚ್ಚಿನ ಇಳುವರಿ ಹಾಗೂ ಆರ್ಥಿಕ ಲಾಭ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಈ ಪದ್ಧತಿಯನ್ನು ಉತ್ತೇಜಿಸಲು ಅಗತ್ಯವಿರುವ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಅವರು ಭರವಸೆ ನೀಡಿದರು.
ಡಾ. ಭೀಮಣ್ಣ ಹಾಗೂ ಡಾ. ಜೆ.ಎಂ. ನಿಡಗುಂದಿ ಅವರು ಅಧಿಕ ಸಾಂದ್ರತೆಯ ನಾಟಿ ಪದ್ಧತಿಯ ತಾಂತ್ರಿಕ ಅಂಶಗಳು, ಗಿಡಗಳ ನಡುವಿನ ಅಂತರ, ಬೆಳೆ ನಿರ್ವಹಣೆ ಹಾಗೂ ಇಳುವರಿ ಹೆಚ್ಚಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ರಾಸಿ ಸೀಡ್ಸ್ ಕಂಪನಿಯ ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ರಾಮನಗೌಡ ಪಾಟೀಲ ಮಾತನಾಡಿ, ಕಂಪನಿಯ ಹತ್ತಿ ತಳಿಗಳು ಹಾಗೂ ಅಧಿಕ ಸಾಂದ್ರತೆಯ ನಾಟಿ ಪದ್ಧತಿಗೆ ಸೂಕ್ತವಾದ ತಳಿಗಳ ಆಯ್ಕೆಯ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ತಂತ್ರಜ್ಞರ ಸಂಸ್ಥೆಯ ರಾಯಚೂರು ಘಟಕದ ಅಧ್ಯಕ್ಷ ಆರ್.ಎ. ಪಾಟೀಲ ಮಾತನಾಡಿ, ಕೃಷಿಯಲ್ಲಿ ಹೊಸ ಪ್ರಯೋಗಗಳು ಯಶಸ್ವಿಯಾಗಬೇಕಾದರೆ ರೈತರು, ಕೃಷಿ ವಿಜ್ಞಾನಿಗಳು, ಕೃಷಿ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಅಗತ್ಯವಾಗಿದೆ ಎಂದರು.
ಅಧಿಕ ಸಾಂದ್ರತೆಯ ನಾಟಿ ಪದ್ಧತಿಯ ಪ್ರಯೋಗಕ್ಕಾಗಿ ತಮ್ಮ ಕೃಷಿ ಜಮೀನನ್ನು ಒದಗಿಸಿ ಸಹಕರಿಸಿದ ಸಿಎ ಶಿವಾನಂದ ಅಮರಖೇಡ ಹಾಗೂ ಅವರ ಕುಟುಂಬದವರನ್ನು ಅಭಿನಂದಿಸಿದರು. ಕ್ಷೇತ್ರೋತ್ಸವ ಆಯೋಜಿಸಿದ ರಾಸಿ ಸೀಡ್ಸ್ ಕಂಪನಿ ಹಾಗೂ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.
ರಾಸಿ ಸೀಡ್ಸ್ ಕಂಪನಿಯ ಪ್ರಾದೇಶಿಕ ಬೆಳೆ ವ್ಯವಸ್ಥಾಪಕ ಶರತಕುಮಾರ್ ಭೋರ್ಶೆಟ್ಟರ್ ಅತಿಥಿಗಳನ್ನು ಸ್ವಾಗತಿಸಿ, ಅಧಿಕ ಸಾಂದ್ರತೆಯ ನಾಟಿ ಪದ್ಧತಿಯ ಅನುಷ್ಠಾನ ಹಾಗೂ ಕ್ಷೇತ್ರ ಪ್ರಯೋಗದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಡಾ. ಎ.ಆರ್. ಕುರುಬರ್, ಡಾ. ಬಸವಣ್ಣೆಪ್ಪ, ನಯೀಮ್ ಹುಸೇನ್, ಎಸ್.ಎನ್. ಉಪ್ಪೇರಿ, ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರು, ಕೃಷಿ ತಜ್ಞರು ಹಾಗೂ ರೈತರು ಭಾಗವಹಿಸಿದ್ದರು.
ಶರತಕುಮಾರ್ ಭೋರ್ಶೆಟ್ಟರ್ ಕಾರ್ಯಕ್ರಮ ನಿರೂಪಿಸಿದರು. ರಾಸಿ ಸೀಡ್ಸ್ ಕಂಪನಿಯ ಟೆರಿಟರಿ ಮ್ಯಾನೇಜರ್ ಸಂಗಮೇಶ್ ಅಂಗಡಿ ವಂದಿಸಿದರು.



