ರಾಯಚೂರು: ನಗರದ ಸೀಮಾಂತರ ವ್ಯಾಪ್ತಿಯ ಸರ್ವೆ ನಂ. 911/7ಕ್ಕೆ ಸಂಬಂಧಿಸಿದ ಭೂ ದಾಖಲೆಗಳಲ್ಲಿ ವಾಸ್ತವ ವಿಸ್ತೀರ್ಣಕ್ಕಿಂತ ಹೆಚ್ಚುವರಿಯಾಗಿ 2 ಗುಂಟೆ ಜಮೀನು ನಮೂದಿಸಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಾಗಿರುವ ದಾಖಲೆಗಳನ್ನು ಸರಿಪಡಿಸುವ ಮೂಲಕ ಮೂಲ ಭೂಮಾಲೀಕರಿಗೆ ನ್ಯಾಯ ಒದಗಿಸಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ರೂಪಾ ಶ್ರೀನಿವಾಸ್ ನಾಯಕ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ 4 ಗುಂಟೆ ವಿಸ್ತೀರ್ಣ ಹೊಂದಿದ್ದ ಜಮೀನನ್ನು ರಿಪೋಡಿ ಪ್ರಕ್ರಿಯೆಯ ಬಳಿಕ 6 ಗುಂಟೆ ಎಂದು ದಾಖಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಭೂ ದಾಖಲೆಗಳಲ್ಲಿನ ಈ ವ್ಯತ್ಯಾಸದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ರಾಯಚೂರು ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿಯ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ರಾಯಚೂರು ಸೀಮಾಂತರದ ಸರ್ವೆ ನಂ. 911/6ರಲ್ಲಿ 4 ಗುಂಟೆ ಜಮೀನು ಇದ್ದು, ಅದು ಸವಾರೆಪ್ಪ ತಂದೆ ಯಲ್ಲಪ್ಪ, ನಾಗಪ್ಪ ತಂದೆ ದೊಡ್ಡ ಸವಾರಪ್ಪ, ಹನುಮಂತಪ್ಪ ತಂದೆ ಮಾರೆಪ್ಪ, ವಿಜಯಕುಮಾರ ತಂದೆ ಮಾರಪ್ಪ, ಜೆ. ಹುಲಿಗೆಪ್ಪ ತಂದೆ ನಾಗಪ್ಪ, ಜೆ. ನಾಗಪ್ಪ ತಂದೆ ಸಣ್ಣ ಸವಾರೆಪ್ಪ ಹಾಗೂ ಹುಲಿಗೆಪ್ಪ ತಂದೆ ಹುಲಿಗೆಪ್ಪ ಅವರಿಗೆ ಸಂಬಂಧಿಸಿದ್ದಾಗಿದೆ. ಈ ಜಮೀನನ್ನು ಜಿ. ಮಲ್ಲಯ್ಯ ತಂದೆ ಜಿ. ಹಂಪಣ್ಣ ಅವರು 1997ರ ಅಕ್ಟೋಬರ್ 31ರಂದು ನೋಂದಾಯಿತ ಮಾರಾಟ ಪತ್ರ ಸಂಖ್ಯೆ 1906/1997-98ರ ಮೂಲಕ ಖರೀದಿಸಿದ್ದರು ಎಂದು ವಿವರಿಸಿದರು.

ಆದರೆ, ಜಮೀನಿನ ರಿಪೋಡಿ ಪ್ರಕ್ರಿಯೆ ಸಂದರ್ಭದಲ್ಲಿ ಸರ್ವೆ ನಂ. 911/6ರ ಬದಲಾಗಿ 911/7 ಎಂದು ಹೊಸ ಸಂಖ್ಯೆ ನೀಡಲಾಗಿದ್ದು, ಇದೇ ವೇಳೆ ಜಮೀನಿನ ವಿಸ್ತೀರ್ಣವನ್ನು 4 ಗುಂಟೆಯಿಂದ 6 ಗುಂಟೆಗೆ ಹೆಚ್ಚಿಸಲಾಗಿದೆ. ಮೂಲ ಮಾರಾಟ ಪತ್ರದಲ್ಲಿ 4 ಗುಂಟೆ ಎಂದು ನಮೂದಾಗಿದ್ದರೂ ನಂತರದ ಕಂದಾಯ ದಾಖಲೆಗಳಲ್ಲಿ ಹೆಚ್ಚುವರಿ 2 ಗುಂಟೆ ಸೇರ್ಪಡೆಯಾಗಿರುವುದು ಹೇಗೆ ಎಂಬ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ ಎಂದು ಆಗ್ರಹಿಸಿದರು.

ಈ ನಡುವೆ 2004ರ ಅಕ್ಟೋಬರ್ 20ರಂದು ನೋಂದಣಿ ದಾಖಲೆ ಸಂಖ್ಯೆ 2537/2004-05ರ ಮೂಲಕ ಸದರಿ ಜಮೀನನ್ನು ನವೋದಯ ಎಜುಕೇಶನ್ ಟ್ರಸ್ಟ್‌ನ ಮಾಲೀಕ ಎಸ್. ರಾಜೇಂದ್ರರೆಡ್ಡಿ ಅವರಿಗೆ ಮಾರಾಟ ಮಾಡಲಾಗಿದೆ. ಈ ಮಾರಾಟ ಪ್ರಕ್ರಿಯೆಗೂ ಮುನ್ನ ಹಾಗೂ ನಂತರ ಸಿದ್ಧಪಡಿಸಲಾದ ದಾಖಲೆಗಳನ್ನು ಪರಿಶೀಲಿಸಿದರೆ ಜಮೀನಿನ ವಿಸ್ತೀರ್ಣದಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದ ವಾಸ್ತವಾಂಶಗಳು ಬೆಳಕಿಗೆ ಬರಬಹುದು ಎಂದು ಅಭಿಪ್ರಾಯಪಟ್ಟರು.

ಜಮೀನಿನ ಮೂಲ ಮಾಲೀಕರು ಪರಿಶಿಷ್ಟ ಜಾತಿಗೆ ಸೇರಿದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳವರಾಗಿದ್ದು, ತಲೆಮಾರುಗಳಿಂದ ಕೃಷಿಯನ್ನೇ ಜೀವನಾಧಾರವಾಗಿ ಮಾಡಿಕೊಂಡು ಬಂದಿದ್ದಾರೆ. ಇಂತಹ ಕುಟುಂಬಗಳ ಆಸ್ತಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಯಾವುದೇ ಬದಲಾವಣೆ ಮಾಡುವಾಗ ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು ಮೂಲ ದಾಖಲೆಗಳು, ನೋಂದಾಯಿತ ಮಾರಾಟ ಪತ್ರಗಳು ಮತ್ತು ಸರ್ವೆ ನಕ್ಷೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗಿತ್ತು. ಆದರೆ, ಈ ಪ್ರಕರಣದಲ್ಲಿ ಅಗತ್ಯ ಪರಿಶೀಲನೆ ನಡೆದಿಲ್ಲ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಜಮೀನಿನ ವಿಸ್ತೀರ್ಣದಲ್ಲಿ 2 ಗುಂಟೆ ಹೆಚ್ಚಳವಾಗಿರುವುದು ಕೇವಲ ದಾಖಲೆಗಳಲ್ಲಿನ ತಾಂತ್ರಿಕ ದೋಷವೇ ಅಥವಾ ಬೇರೆ ಕಾರಣಗಳಿಂದ ಈ ವ್ಯತ್ಯಾಸ ಸಂಭವಿಸಿದೆಯೇ ಎಂಬುದನ್ನು ಪತ್ತೆಹಚ್ಚುವುದು ಅಗತ್ಯವಾಗಿದೆ. ರಿಪೋಡಿ ಪ್ರಕ್ರಿಯೆಯಲ್ಲಿ ಅನುಸರಿಸಲಾದ ಕ್ರಮಗಳು, ಅಳತೆ ವಿವರಗಳು, ಫಾರಂ ನಂ. 10, ಸರ್ವೆ ನಕ್ಷೆ ಹಾಗೂ ಪಹಣಿ ದಾಖಲೆಗಳನ್ನು ಮೂಲ ಮಾರಾಟ ಪತ್ರಗಳೊಂದಿಗೆ ಹೋಲಿಸಿ ಪರಿಶೀಲಿಸಬೇಕು. ದಾಖಲೆಗಳನ್ನು ಸಿದ್ಧಪಡಿಸಿದ ಸಂದರ್ಭದಲ್ಲಿ ನಿಯಮಾನುಸಾರ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನೂ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಪಹಣಿಯಲ್ಲಿ ಸರ್ವೆ ನಂ. 911/7ರ ಜಮೀನಿನ ವಿಸ್ತೀರ್ಣ 6 ಗುಂಟೆ ಎಂದು ದಾಖಲಾಗಿದ್ದು, ಮೂಲ ದಾಖಲೆಗಳ ಪರಿಶೀಲನೆಯಿಂದ ವಾಸ್ತವವಾಗಿ 4 ಗುಂಟೆ ಮಾತ್ರ ಇರುವುದು ದೃಢಪಟ್ಟಲ್ಲಿ ಪಹಣಿಯನ್ನು ತಕ್ಷಣ ತಿದ್ದುಪಡಿ ಮಾಡಬೇಕು. ಅಲ್ಲದೆ, ಫಾರಂ ನಂ. 10, ಸರ್ವೆ ನಕ್ಷೆ ಸೇರಿದಂತೆ ಇತರ ದಾಖಲೆಗಳಲ್ಲಿ ತಪ್ಪುಗಳು ಕಂಡುಬಂದರೆ ಅವುಗಳನ್ನು ಕಾನೂನು ಪ್ರಕಾರ ತಿದ್ದುಪಡಿ ಮಾಡಬೇಕು ಅಥವಾ ಅಗತ್ಯವಿದ್ದಲ್ಲಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಭೂಮಿಯ ಹಕ್ಕು ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ದಾಖಲೆಗಳ ನಿಖರತೆ ಅತ್ಯಂತ ಮುಖ್ಯವಾಗಿದೆ. ದಾಖಲೆಗಳಲ್ಲಿನ ಸಣ್ಣ ವ್ಯತ್ಯಾಸವೂ ಮುಂದಿನ ದಿನಗಳಲ್ಲಿ ಆಸ್ತಿ ವಿವಾದಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಲೋಪಗಳು ದೃಢಪಟ್ಟಲ್ಲಿ ಅದಕ್ಕೆ ಕಾರಣರಾದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು, ಮೂಲ ಮಾಲೀಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ರೂಪಾ ಶ್ರೀನಿವಾಸ್ ನಾಯಕ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಜಯಕುಮಾರ್, ತಾಯಮ್ಮ, ಕಸಮ್ಮ, ಜಂಬಲಮ್ಮ, ಬೇಬಿ, ಸವಾರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.