ರಾಯಚೂರು: ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಹಿರಿಯರನ್ನು ಗೌರವಿಸುವುದರ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಕುಟುಂಬದ ಪ್ರತಿಯೊಬ್ಬರ ಮೇಲಿದೆ. ಹೆಣ್ಣು ಸಂಸಾರದ ಕಣ್ಣು ಎಂಬ ಮಾತಿನಂತೆ ಕುಟುಂಬವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕಿ ಅನೀತಾ ಹಿರೇಮನಿ ಹೇಳಿದರು.
ನಗರದ ಮಾರುತಿ ನಗರ ಬಡಾವಣೆಯ ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಮಂದಿರದಲ್ಲಿ ಆಯೋಜಿಸಿದ್ದ 59ನೇ ಶರಣ ಚಿಂತನ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಸಮಾಜದಲ್ಲಿ ಸಮಾನತೆ, ಮಾನವೀಯತೆ ಹಾಗೂ ನೈತಿಕ ಮೌಲ್ಯಗಳನ್ನು ಬಿತ್ತಿದರು. ಅನುಭವ ಮಂಟಪದಲ್ಲಿ ಶರಣರು ತಮ್ಮ ಕಾಯಕದ ಅನುಭವಗಳನ್ನು ಹಂಚಿಕೊಂಡು ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಅಂದಿನ ಅನುಭವ ಮಂಟಪವು ಸಮಾನತೆ ಮತ್ತು ವಿಚಾರ ವಿನಿಮಯಕ್ಕೆ ವೇದಿಕೆಯಾಗಿದ್ದು, ಇಂದಿನ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ಪೂರಕವಾದ ಚಿಂತನೆಗಳನ್ನು ಒಳಗೊಂಡಿತ್ತು ಎಂದು ತಿಳಿಸಿದರು.
ಬಟ್ಟೆ ಕೊಳೆಯಾದರೆ ಮಡಿವಾಳ ಶುಚಿಗೊಳಿಸುತ್ತಾನೆ. ಆದರೆ ಮನಸ್ಸು ಕಲುಷಿತವಾದರೆ ಅದನ್ನು ಶುದ್ಧಗೊಳಿಸುವುದು ಹೇಗೆ ಎಂಬ ಪ್ರಶ್ನೆಗೆ ಶರಣರ ಚಿಂತನೆಗಳು ಉತ್ತರ ನೀಡುತ್ತವೆ. ಇಂತಹ ಶಿವಾನುಭವ ಗೋಷ್ಠಿಗಳು ಮನುಷ್ಯನಲ್ಲಿ ವೈಚಾರಿಕತೆ, ಆತ್ಮಾವಲೋಕನ ಹಾಗೂ ನೈತಿಕ ಪ್ರಜ್ಞೆಯನ್ನು ಬೆಳೆಸುತ್ತವೆ. ಇಂದಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗಿ ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಕುಟುಂಬಗಳು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟ ಅನುಭವಿಸುತ್ತಿವೆ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಹೊಂದಾಣಿಕೆಯಿಂದ ಬದುಕಿದಾಗ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಅಭಿಪ್ರಾಯಪಟ್ಟರು.
ಶರಣ ಹಡಪದ ಅಪ್ಪಣ್ಣನವರ ಜೀವನ ಮೌಲ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಿದ ವೇದಾಂತ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು, ಹನ್ನೆರಡನೇ ಶತಮಾನದ ಬಸವಾದಿ ಶರಣರಲ್ಲಿ ಹಡಪದ ಅಪ್ಪಣ್ಣ ಪ್ರಮುಖರಾಗಿದ್ದರು. ಅವರ ವಚನಗಳು ಮನುಷ್ಯನ ನಡತೆ, ನುಡಿ ಹಾಗೂ ಆಚಾರ-ವಿಚಾರಗಳ ಮಹತ್ವವನ್ನು ತಿಳಿಸುತ್ತವೆ. ವ್ಯಕ್ತಿಯನ್ನು ಬಾಹ್ಯ ವೇಷಭೂಷಣದಿಂದ ಅಳೆಯದೆ ಆತನ ನಡೆನುಡಿ ಮತ್ತು ಜೀವನ ಮೌಲ್ಯಗಳಿಂದ ಗುರುತಿಸಬೇಕು ಎಂಬ ಸಂದೇಶವನ್ನು ಶರಣರು ನೀಡಿದ್ದಾರೆ ಎಂದರು.
ಶರಣರ ತತ್ವಾದರ್ಶಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ನಿರಂತರವಾಗಿ ಶಿವಾನುಭವ ಗೋಷ್ಠಿ ಹಾಗೂ ಅನ್ನದಾಸೋಹ ಆಯೋಜಿಸುತ್ತಿರುವ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ. ಅಲ್ಲದೆ, ಅನುಭವ ಮಂಟಪ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಬಿ. ಬಸವರಾಜ್, ಕಳೆದ 58 ತಿಂಗಳಿಂದ ನಿರಂತರವಾಗಿ ಶರಣ ಚಿಂತನ ಗೋಷ್ಠಿ ಹಾಗೂ ಅನ್ನದಾಸೋಹ ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ಮಠಗಳ ಸ್ವಾಮೀಜಿಗಳು, ಹಿರಿಯ ಚಿಂತಕರು ಹಾಗೂ ಉಪನ್ಯಾಸಕರನ್ನು ಆಹ್ವಾನಿಸಿ ಶರಣರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಮಂದಿರದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಅನುಭವ ಮಂಟಪವನ್ನು ಮುಂದಿನ ದಿನಗಳಲ್ಲಿ ನಾಟಕ, ಸಂಗೀತ, ಸಾಹಿತ್ಯ, ಶರಣ ಚಿಂತನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಮುಕ್ತವಾಗಿ ಬಳಸಲು ಅವಕಾಶ ಕಲ್ಪಿಸಲಾಗುವುದು. ಶರಣರ ಸಂದೇಶವನ್ನು ನಗರದ ಮನೆಮನೆಗೂ ತಲುಪಿಸುವುದು ಸಮಿತಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂತನ ಎಲೆಕ್ಟ್ರಿಕಲ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷ ರಾಮು ಗಾಣದಾಳ್, ಜಿಲ್ಲಾ ಪ್ರಾಥಮಿಕ ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಸುಮಾ, ಕೃಷ್ಣಾ ಭಾಗ್ಯ ಜಲ ನಿಗಮದ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಗುರುಲಿಂಗಪ್ಪ ಹಾಗೂ ಅಮಾವಾಸ್ಯೆಯ ಅನ್ನದಾಸೋಹ ಸೇವಾಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್, ಹಡಪದ ಸಮಾಜದ ಮುಖಂಡ ಧನಂಜಯ, ಸೋಮಶೆಟ್ಟಿ ಶ್ರೀನಿವಾಸ, ಅನ್ನದಾಸೋಹ ಸಂಯೋಜಕ ಡಿ.ಬಿ. ಕಟ್ಟಿಮನಿ ಉಪಸ್ಥಿತರಿದ್ದರು.
ಕೆ. ಕರಿಯಪ್ಪ ಪ್ರಾರ್ಥಿಸಿದರು. ಷಣ್ಮುಖಪ್ಪ ವಲ್ಕಂದಿನ್ನಿ ಸ್ವಾಗತಿಸಿದರು. ಭೀಮಣ್ಣ ಗಂಗವಾರ ನಿರೂಪಿಸಿದರು. ಚಂದ್ರಶೇಖರ ಯಾಕ್ಲಾಸಪುರ ವಂದಿಸಿದರು. ಸೂರ್ಯೋದಯ ವಾಕಿಂಗ್ ಕ್ಲಬ್, ಶ್ರೀ ಗಿರಿ ಅಭಯ ಆಂಜನೇಯಸ್ವಾಮಿ ಸೇವಾ ಸಮಿತಿ, ಮಹಿಳಾ ಮಂಡಳಿ ಹಾಗೂ ಯುವ ಗಜಾನನ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಬಡಾವಣೆಯ ನಾಗರಿಕರು ಭಾಗವಹಿಸಿದ್ದರು.



