ರಾಯಚೂರು: ಏಡ್ಸ್ ತಡೆಗಟ್ಟುವಲ್ಲಿ ಸಾಮಾಜಿಕ ಜಾಗೃತಿ, ವೈಜ್ಞಾನಿಕ ಅರಿವು ಹಾಗೂ ಮಾನವೀಯ ಮನೋಭಾವ ಅತ್ಯಂತ ಅಗತ್ಯವಾಗಿದ್ದು, ಯುವಜನರು ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಉಪನ್ಯಾಸಕ ಟಿಕಪ್ಪ ಚವ್ಹಾಣ ಹೇಳಿದರು.
ರಾಯಚೂರು ತಾಲೂಕಿನ ಮನ್ಸಸಲಾಪುರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಹೇರೂರು ಚಂದ್ರಾಯಗೌಡ ಮಲ್ಹಾರ ಸಿದ್ದಪ್ಪಗೌಡ ಪದವಿ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನವಾದ ಬುಧವಾರ (ಅ.14) 'ಏಡ್ಸ್ ತಡೆಗಟ್ಟುವಿಕೆಯಲ್ಲಿ ಸಮಾಜದಲ್ಲಿ ಯುವಕರ ಪಾತ್ರ' ವಿಷಯದ ಕುರಿತು ನಡೆದ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್ಐವಿ ಸೋಂಕು ಹರಡುವ ವಿಧಾನಗಳು ಹಾಗೂ ಅದನ್ನು ತಡೆಗಟ್ಟಲು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಏಡ್ಸ್ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ. ಎಚ್ಐವಿ ಸೋಂಕಿತರನ್ನು ತಾರತಮ್ಯದಿಂದ ಕಾಣದೆ, ಅವರೊಂದಿಗೆ ಮಾನವೀಯತೆಯಿಂದ ವರ್ತಿಸಬೇಕು. ಆರೋಗ್ಯಕರ ಜೀವನಶೈಲಿ ಹಾಗೂ ಜವಾಬ್ದಾರಿಯುತ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಶರಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದಲ್ಲಿ ಪಡೆದುಕೊಂಡ ಆರೋಗ್ಯ ಸಂಬಂಧಿತ ಮಾಹಿತಿಯನ್ನು ತಮ್ಮ ಕುಟುಂಬ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಬೇಕು. ಜಾಗೃತಿ ಕಾರ್ಯಕ್ರಮಗಳು ಕೇವಲ ಶಿಬಿರಕ್ಕೆ ಸೀಮಿತವಾಗದೆ ಸಮಾಜದ ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು ಎಂದರು.
ಸಹ ಶಿಬಿರಾಧಿಕಾರಿ ಹಾಗೂ ಇಂಗ್ಲಿಷ್ ಉಪನ್ಯಾಸಕ ಈರಪ್ಪ ಸರ್ಜಾಪುರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ, ಸ್ವಚ್ಛತೆ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಪರ್ವತರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ಸಮಾಜದ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕೆ ಕೈಜೋಡಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಸದಸ್ಯ ನೀಲಕಂಠರಾವ ಪಾಟೀಲ ಮಾತನಾಡಿ, ಏಡ್ಸ್ ತಡೆಗಟ್ಟುವುದು ಆರೋಗ್ಯ ಇಲಾಖೆಯೊಂದರ ಜವಾಬ್ದಾರಿಯಲ್ಲ. ಸಮಾಜದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಜಾಗೃತರಾಗಬೇಕು. ಸೋಂಕಿತರ ಬಗ್ಗೆ ತಾರತಮ್ಯ ತೋರದೆ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಯುವಕರು ಜನಜಾಗೃತಿಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹ ಶಿಬಿರಾಧಿಕಾರಿ ಗಂಗಾಧರ, ಉಪನ್ಯಾಸಕರಾದ ದೀಪಾ, ಅನ್ನಪೂರ್ಣ, ಅಜೇಯಕುಮಾರ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.



