ರಾಯಚೂರು, ಅ.14: ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಜನವಾಡದ ಅಂಬೇಡ್ಕರ್ ನಗರದ ನಿವಾಸಿ ಈರಮ್ಮ ತಂದೆ ಬೋಳಬಂಡಿ (27) ಎಂಬ ಯುವತಿ ಸೆಪ್ಟೆಂಬರ್ 1ರಿಂದ ಕಾಣೆಯಾಗಿದ್ದು, ಆಕೆಯ ಪತ್ತೆಗೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 1ರಂದು ಮಧ್ಯಾಹ್ನ ಸುಮಾರು 3.30ಕ್ಕೆ ಮನೆಯಲ್ಲಿಟ್ಟಿದ್ದ ಚಪ್ಪಲಿಗಳು ಕಾಣಿಸದ ಹಿನ್ನೆಲೆಯಲ್ಲಿ ಯಾವುದೋ ನಾಯಿ ಎಳೆದುಕೊಂಡು ಹೋಗಿರಬಹುದು ಎಂದು ಭಾವಿಸಿ ಅವುಗಳನ್ನು ಹುಡುಕಲು ಮನೆಯಿಂದ ಹೊರಗೆ ಹೋದ ಈರಮ್ಮ, ನಂತರ ಮರಳಿ ಮನೆಗೆ ಬಂದಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಕುಟುಂಬಸ್ಥರು ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರಮುಖ ಪ್ರದೇಶಗಳು ಹಾಗೂ ಸಂಬಂಧಿಕರ ಮನೆಗಳು ಮತ್ತು ಊರುಗಳಲ್ಲಿ ಹುಡುಕಾಟ ನಡೆಸಿದರೂ ಆಕೆಯ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರಂದು ಈರಮ್ಮ ಅವರ ತಾಯಿ ಲಕ್ಷ್ಮೀ ಅವರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಗುನ್ನೆ ಸಂಖ್ಯೆ 85/2026ರಡಿ ಮಹಿಳೆ ಕಾಣೆಯಾದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ಈರಮ್ಮ ತರಕಾರಿ ವ್ಯಾಪಾರ ಮಾಡುತ್ತಿದ್ದು, ಸುಮಾರು 5 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಸಾಧಾರಣ ಎಣ್ಣೆಗೆಂಪು ಮೈಬಣ್ಣ ಹಾಗೂ ಉದ್ದನೆಯ ಮುಖ ಹೊಂದಿದ್ದಾರೆ. ಕಾಣೆಯಾದ ಸಂದರ್ಭದಲ್ಲಿ ಬಾದಾಮಿ ಬಣ್ಣದ ಪಂಜಾಬಿ ಉಡುಪು ಧರಿಸಿದ್ದರು. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಚಹರೆಯನ್ನು ಹೋಲುವ ಯುವತಿ ಎಲ್ಲಿಯಾದರೂ ಕಂಡುಬಂದಲ್ಲಿ ಅಥವಾ ಆಕೆಯ ಕುರಿತು ಮಾಹಿತಿ ದೊರೆತಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ 08532-235187, 9480803800, ಡಿವೈಎಸ್ಪಿ ಕಚೇರಿ 08532-236338, 9480803820, ಪಶ್ಚಿಮ ವೃತ್ತದ ಸಿಪಿಐ 08532-226856, 9480803831 ಅಥವಾ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್ಐ 08532-235600, 9480803849 ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



