ರಾಯಚೂರು: ನಗರದ ಡ್ಯಾಡಿ ಕಾಲೋನಿ, ಗಣೇಶ ಕಾಲೋನಿಯ ಶ್ರೀ ಈಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ನಾಲ್ಕನೇ ದಿನದ ಪುರಾಣ ಪ್ರವಚನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ಆಯೋಜಿಸಲಾಯಿತು.
ದೇವಸ್ಥಾನದ ಅಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರ ಮತ್ತು ದೇವಸ್ಥಾನದ ಸೇವಾ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಶರನ್ನವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಪುರಾಣ ಪ್ರವಚನದ ನಂತರ ಮಹಿಳೆಯರು ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀ ಗಣೇಶ ನವಶಕ್ತಿ ನೃತ್ಯಾಲಯದ ಕಲಾವಿದರು ಶಾಂಭವಿ ಮಾತೆಯ ಭಕ್ತಿಗೀತೆಗೆ ಪ್ರಸ್ತುತಪಡಿಸಿದ ಭರತನಾಟ್ಯ ಪ್ರದರ್ಶನವು ನೆರೆದಿದ್ದ ಭಕ್ತರ ಗಮನ ಸೆಳೆಯಿತು. ಕಲಾವಿದರ ನೃತ್ಯಾಭಿನಯಕ್ಕೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.
ಬಳಿಕ ಮಕ್ಕಳು ಹಾಗೂ ಯುವತಿಯರು ಭಕ್ತಿಗೀತೆಗಳು, ವಚನ ಗೀತೆಗಳು ಮತ್ತು ದೇವರ ಸ್ತುತಿಗೆ ಸಂಬಂಧಿಸಿದ ಶ್ಲೋಕಗಳನ್ನು ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಧಾರ್ಮಿಕ ಮೆರುಗು ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ನಂತರ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾ ಸಮಿತಿಯ ಪದಾಧಿಕಾರಿಗಳು, ಬಡಾವಣೆಯ ಹಿರಿಯರು, ಮಹಿಳೆಯರು, ಮಕ್ಕಳು ಹಾಗೂ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.



