ರಾಯಚೂರು, ಅ.15: ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪುರಸ್ಕೃತ ಹಾಗೂ ಖ್ಯಾತ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನವನ್ನು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ವತಿಯಿಂದ ಗುರುವಾರ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷ ಶ್ರೀಪಾಲ್ ಕೋಟಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ದೇಶದ ವೈಜ್ಞಾನಿಕ ಪ್ರಗತಿ, ಶಿಕ್ಷಣ ಕ್ಷೇತ್ರ ಹಾಗೂ ಯುವಜನರ ಭವಿಷ್ಯ ರೂಪಿಸುವಲ್ಲಿ ಕಲಾಂ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು, ಸಾಮಾನ್ಯ ಕುಟುಂಬದಿಂದ ಬಂದ ಡಾ. ಅಬ್ದುಲ್ ಕಲಾಂ ಅವರು ತಮ್ಮ ಪರಿಶ್ರಮ, ಜ್ಞಾನ ಮತ್ತು ಸಾಧನೆಯ ಮೂಲಕ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದರು. ವಿಜ್ಞಾನಿಯಾಗಿ ಭಾರತದ ರಕ್ಷಣಾ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ತಮ್ಮ ಸರಳ ವ್ಯಕ್ತಿತ್ವ ಹಾಗೂ ಜನಸಾಮಾನ್ಯರೊಂದಿಗಿನ ಆತ್ಮೀಯ ಒಡನಾಟದಿಂದ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.
ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ ಎಂಬ ದೃಢ ನಂಬಿಕೆ ಹೊಂದಿದ್ದ ಕಲಾಂ ಅವರು, ವಿದ್ಯಾರ್ಥಿಗಳಲ್ಲಿ ದೊಡ್ಡ ಕನಸು ಕಾಣುವ ಧೈರ್ಯ ತುಂಬಿದ್ದರು. ಶಿಕ್ಷಣದೊಂದಿಗೆ ಶಿಸ್ತು, ಪರಿಶ್ರಮ, ನೈತಿಕ ಮೌಲ್ಯಗಳು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ನಿರಂತರ ಪ್ರೇರಣೆ ನೀಡುತ್ತಿದ್ದರು. ಅವರ ಜೀವನ ಮತ್ತು ಸಾಧನೆ ಇಂದಿನ ಯುವಪೀಳಿಗೆಗೆ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಡಾ. ಕಲಾಂ ಅವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿಯೂ ತಮ್ಮ ಸರಳತೆಯನ್ನು ಕಾಪಾಡಿಕೊಂಡು ಜನಸ್ನೇಹಿ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ದೇಶದ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಗೆ ಯುವಜನರ ಸೃಜನಶೀಲತೆ ಹಾಗೂ ಶಿಕ್ಷಣವೂ ಅಗತ್ಯ ಎಂಬ ಅವರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ. ಅವರ ಆಶಯಗಳನ್ನು ಸಾಕಾರಗೊಳಿಸಲು ಪ್ರತಿಯೊಬ್ಬರೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ರಾಜ್ ಗುರುವ್, ರವೀಂದ್ರ ಜಲ್ದಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎನ್. ವಿನಾಯಕ ರಾವ್, ಹಿರಿಯ ಮುಖಂಡ ಮುಕ್ತಿಯಾರ್, ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಜಿಲ್ಲಾ ಉಪಾಧ್ಯಕ್ಷ ಫ್ರಾನ್ಸಿಸ್ ರಾಜ್, ಖಜಾಂಚಿ ಅವಿನಾಶ್ ರಂಕಾ ಜೈನ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗೌಡ ಮೀರಾಪುರ್ ಭಾಗವಹಿಸಿದ್ದರು.
ಇದೇ ವೇಳೆ ನರೇಶ್, ಈರೇಶ್, ಅನೋಲ್, ವೆಂಕಟೇಶ್, ರವಿಶಂಕರ್ ಬಾಬಾ, ನರಸಿಂಹಲು, ಶಶಿಧರ್, ಮಂಜು ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಅಲ್ಪಸಂಖ್ಯಾತರ ಮೋರ್ಚಾದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಡಾ. ಅಬ್ದುಲ್ ಕಲಾಂ ಅವರ ದೇಶಪ್ರೇಮ, ಸರಳತೆ ಮತ್ತು ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.



