ರಾಯಚೂರು, ಅ.15: ರಾಯಚೂರು ಜಿಲ್ಲಾ ಯಾದವ ಸಂಘದ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಹನುಮಂತಪ್ಪ ಯಾದವ್ ಅವರು ರಾಜ್ಯಮಟ್ಟದ ‘ಕರ್ನಾಟಕ ಸಮಾಜ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕಲಾ ಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ 75 ವರ್ಷದ ಹಿರಿಯ ಸಮಾಜ ಸೇವಕ ಹನುಮಂತಪ್ಪ ಯಾದವ್ ಅವರು ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಸಂಘಟನೆಗಳ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹನುಮಂತಪ್ಪ ಯಾದವ್ ಅವರು ಯಾದವ ಸಮಾಜದ ಸಂಘಟನೆ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಾಜದ ಅಭಿವೃದ್ಧಿ ಹಾಗೂ ಸಂಘಟನಾತ್ಮಕ ಕಾರ್ಯಗಳಲ್ಲಿ ಅವರ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ನವೆಂಬರ್ 8ರಂದು ರಾಯಚೂರಿನ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ವತಿಯಿಂದ ಆಯೋಜಿಸಿರುವ ‘ದೇಸಿ ಸಂಭ್ರಮ’ ಕಾರ್ಯಕ್ರಮದಲ್ಲಿ ಕೆ. ಹನುಮಂತಪ್ಪ ಯಾದವ್ ಅವರಿಗೆ ‘ಕರ್ನಾಟಕ ಸಮಾಜ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಮಾರುತಿ ಬಡಿಗೇರ್ ತಿಳಿಸಿದ್ದಾರೆ.