ರಾಯಚೂರು: ಬಾಲ್ಯದಿಂದಲೇ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಯಾವುದೇ ತಾರತಮ್ಯ ಮಾಡದೆ ಸಮಾನವಾಗಿ ಪೌಷ್ಟಿಕ ಆಹಾರ, ಆರೋಗ್ಯ ಸೇವೆ ಹಾಗೂ ಶಿಕ್ಷಣ ಒದಗಿಸಬೇಕು. ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಲಸಿಕೆ ಹಾಕಿಸುವುದರ ಜೊತೆಗೆ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿದಾಗ ಮಾತ್ರ ಆರೋಗ್ಯವಂತ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಪುಂಡಲಿಕ ಗಂಜಿ ಹೇಳಿದರು.
ನಗರದ ಸಿಯಾತಲಾಬ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ತಾಯಿ ಮತ್ತು ಮಗುವಿನ ಸುರಕ್ಷತೆ, ಪೌಷ್ಟಿಕ ಆಹಾರ ಹಾಗೂ ನೈರ್ಮಲ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಬಾಲ್ಯದಲ್ಲಿ ಕಾಡುವ ವಿವಿಧ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಲು ಸರ್ಕಾರದ ಲಸಿಕಾ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ಪಾಲಕರು ಮಕ್ಕಳಿಗೆ ನಿಗದಿತ ವೇಳಾಪಟ್ಟಿಯಂತೆ ಲಸಿಕೆಗಳನ್ನು ತಪ್ಪದೆ ಹಾಕಿಸಬೇಕು. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ಕಿಶೋರಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಆರೋಗ್ಯಕರ ಜೀವನಕ್ಕೆ ಸಮತೋಲಿತ ಆಹಾರ ಸೇವನೆ ಮತ್ತು ಸ್ವಚ್ಛತೆ ಪ್ರಮುಖವಾಗಿವೆ. ಆಹಾರ ಸೇವಿಸುವ ಮೊದಲು ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ದೈನಂದಿನ ಆಹಾರದಲ್ಲಿ ಪೌಷ್ಟಿಕ ಪದಾರ್ಥಗಳು, ತಾಜಾ ಹಣ್ಣು ಮತ್ತು ತರಕಾರಿಗಳನ್ನು ಬಳಸಬೇಕು. ಶುದ್ಧ ಕುಡಿಯುವ ನೀರು ಸೇವಿಸುವುದರ ಜೊತೆಗೆ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಕಂಡುಬರುವ ಅತಿಸಾರ, ನ್ಯುಮೋನಿಯಾ, ಬಾಲ್ಯ ಕ್ಷಯರೋಗ ಹಾಗೂ ಡಿಫ್ತೀರಿಯಾದಂತಹ ಕಾಯಿಲೆಗಳ ಲಕ್ಷಣಗಳ ಬಗ್ಗೆ ಪಾಲಕರು ಜಾಗೃತರಾಗಿರಬೇಕು. ಮಲೇರಿಯಾ, ಡೆಂಗ್ಯೂ, ಚಿಕೂನ್ಗುನ್ಯಾ ಮತ್ತು ಆನೆಕಾಲು ರೋಗ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ವಾಂತಿಭೇದಿ ಹಾಗೂ ಕಾಲರಾದಂತಹ ರೋಗಗಳು ಹರಡುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಅಂಗನವಾಡಿ ಕೇಂದ್ರಗಳ ಮೂಲಕ ದೊರೆಯುವ ಪೌಷ್ಟಿಕ ಆಹಾರ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ತಾಯಿ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ವಿವಿಧ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ ಜಗತಾಪ್ ಮಾತನಾಡಿ, ಕುಟುಂಬ ಕಲ್ಯಾಣ ಯೋಜನೆಗಳಡಿ ಲಭ್ಯವಿರುವ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನಗಳ ಬಗ್ಗೆ ದಂಪತಿಗಳು ಅರಿವು ಹೊಂದಬೇಕು. ಮಕ್ಕಳ ಜನನದ ನಡುವೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅನುಕೂಲಕರವಾಗಿದೆ ಎಂದು ಹೇಳಿದರು.
ಗರ್ಭಿಣಿಯರು ಗರ್ಭಧಾರಣೆಯ ಆರಂಭಿಕ ಹಂತದಲ್ಲಿಯೇ ಆರೋಗ್ಯ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡು ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸಲಹೆಯಂತೆ ಅಗತ್ಯ ಲಸಿಕೆಗಳನ್ನು ಪಡೆಯಬೇಕು. ಮಕ್ಕಳ ಬೆಳವಣಿಗೆಯ ಮೇಲೂ ನಿಗಾ ವಹಿಸಿ, ನಿಗದಿತ ಸಮಯದಲ್ಲಿ ಲಸಿಕೆ ಹಾಕಿಸುವ ಮೂಲಕ ರೋಗಗಳಿಂದ ರಕ್ಷಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಕ್ಕಳಿಗೆ ವಿವಿಧ ರೋಗಗಳ ವಿರುದ್ಧ ಲಸಿಕೆ ನೀಡಲಾಯಿತು. ಬಳಿಕ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಹಾಗೂ ಕಿಶೋರಿಯರಿಗೆ ಪೌಷ್ಟಿಕ ಆಹಾರ, ಸ್ವಚ್ಛತೆ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಕುರಿತು ಆರೋಗ್ಯ ಶಿಕ್ಷಣ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ರೇಣುಕಾ, ಸ್ವಯಂಸೇವಾ ಸಂಸ್ಥೆಯ ಸದಸ್ಯ ಓಂಕಾರ, ಅಂಗನವಾಡಿ ಕಾರ್ಯಕರ್ತೆ ಸರಸ್ವತಿ, ಆಶಾ ಕಾರ್ಯಕರ್ತೆಯರಾದ ಈರಮ್ಮ, ಅರುಣಾ ಸೇರಿದಂತೆ ಗರ್ಭಿಣಿಯರು, ತಾಯಂದಿರು ಹಾಗೂ ಸ್ಥಳೀಯ ಮಹಿಳೆಯರು ಉಪಸ್ಥಿತರಿದ್ದರು.



