ರಾಯಚೂರು: ನಗರದ ಬೃಹಸ್ಪತಿವಾರಪೇಟೆಯ ಉಪ್ಪಾರವಾಡಿಯ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ 55ನೇ ನವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ಕಾಮಧೇನು ಕಲ್ಪವೃಕ್ಷ ವಾಹನೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಸಡಗರದಿಂದ ಜರುಗಿತು.
ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಆಯೋಜಿಸಿರುವ ನವರಾತ್ರಿ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಭಜನಾ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕಾಮಧೇನು ಕಲ್ಪವೃಕ್ಷ ವಾಹನೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಮಧ್ಯಾಹ್ನ ಭಕ್ತರಿಗಾಗಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 7 ಗಂಟೆಗೆ ಮಹಿಳೆಯರು ಸಾಂಪ್ರದಾಯಿಕವಾಗಿ ಕಳಸಗಳನ್ನು ಹೊತ್ತು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಭಕ್ತರು ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆ ಸಲ್ಲಿಸಿದರು.
ಸಂಜೆ 7.30ಕ್ಕೆ ಭಜನಾ ಮಂಡಳಿಯ ಸದಸ್ಯರಿಂದ ಭಕ್ತಿಗೀತೆಗಳ ಸೇವೆ ನಡೆಯಿತು. ಭಜನೆ ಹಾಗೂ ದೇವರ ನಾಮಸ್ಮರಣೆಯಿಂದ ದೇವಸ್ಥಾನದ ಆವರಣದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಉಪ್ಪಾರವಾಡಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿದ್ದರು. ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಕಾಮಧೇನು ಕಲ್ಪವೃಕ್ಷ ವಾಹನೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಿದವು.



