ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2023ನೇ ಸಾಲಿನಲ್ಲಿ ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ನಿಯಮಗಳ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿರುವ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ, ನೇಮಕಾತಿ ಆದೇಶಗಳನ್ನು ರದ್ದುಗೊಳಿಸಿ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯವು 2023ರ ಅಕ್ಟೋಬರ್ 18ರಂದು ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ, ನೇಮಕಾತಿಗೆ ಮುನ್ನ ಆರ್ಥಿಕ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದೆ ನಿಯಮಗಳನ್ನು ಉಲ್ಲಂಘಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯ ಆರಂಭದಿಂದ ಅಂತಿಮ ಆಯ್ಕೆಯವರೆಗೆ ಹಲವು ಅನುಮಾನಾಸ್ಪದ ಬೆಳವಣಿಗೆಗಳು ನಡೆದಿದ್ದು, ಇವುಗಳ ಬಗ್ಗೆ ಸಮಗ್ರ ತನಿಖೆ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಲಿಖಿತ ಪರೀಕ್ಷೆ, ಸಂದರ್ಶನ, ಸ್ಕೋರ್ ಕಾರ್ಡ್ ಹಾಗೂ ಮೀಸಲಾತಿ ರೋಸ್ಟರ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನವನ್ನು ನಿಗದಿಪಡಿಸಲಾಗಿತ್ತು. ವಿಶ್ವವಿದ್ಯಾಲಯದಲ್ಲಿಯೇ ಪರೀಕ್ಷೆ ನಡೆಸಲು ಅಗತ್ಯ ಸೌಲಭ್ಯಗಳಿದ್ದರೂ, ಪರೀಕ್ಷಾ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಿರುವ ಉದ್ದೇಶವೇನು ಎಂಬುದಕ್ಕೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕಾಗಿದೆ. ಪರೀಕ್ಷಾ ಕೇಂದ್ರ ಬದಲಾವಣೆಯ ಹಿಂದಿನ ಕಾರಣಗಳು ಹಾಗೂ ಅದಕ್ಕೆ ಅನುಮೋದನೆ ನೀಡಿದ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.

ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಅಭ್ಯರ್ಥಿಗಳಿಂದ ತಲಾ ₹40 ಲಕ್ಷದಿಂದ ₹50 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಹಣ ನೀಡಿದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರಗಳ ಹಂಚಿಕೆ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಲಾಗಿದೆ ಎಂಬ ಅನುಮಾನವಿದ್ದು, ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿದರು.

ನೇಮಕಾತಿಯಲ್ಲಿನ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ಇಬ್ರಾಹಿಂ ಕಲೀಲ್ ತಂದೆ ರಾಜಾ ಸಾಬ್ ಎಂಬುವವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ ಎಂದು ವಿರೂಪಾಕ್ಷಿ ತಿಳಿಸಿದರು. ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗೆ ಹಾಜರಾಗದಿದ್ದರೂ ₹40 ಲಕ್ಷ ಮುಂಗಡವಾಗಿ ನೀಡಿದರೆ ನೇಮಕಾತಿ ಆದೇಶ ಕೊಡಿಸುವುದಾಗಿ ಹಾಗೂ ನಂತರ ₹10 ಲಕ್ಷ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು ಎಂಬುದು ದೂರಿನಲ್ಲಿರುವ ಆರೋಪವಾಗಿದೆ. ಈ ಆರೋಪದ ಸತ್ಯಾಸತ್ಯತೆಯನ್ನು ತನಿಖಾ ಸಂಸ್ಥೆಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಪತಿ ಹನುಮಂತಪ್ಪ, ಆಡಳಿತ ಮಂಡಳಿಯ ಸದಸ್ಯ ಡಿ. ಮಲ್ಲಿಕಾರ್ಜುನ, ಡಾ. ರಾಜಣ್ಣ ಹಾಗೂ ಬೆಂಗಳೂರಿನ ಜಿಕೆವಿಕೆ ಪರೀಕ್ಷಾ ಕೇಂದ್ರದೊಂದಿಗೆ ಸಂಬಂಧ ಹೊಂದಿರುವ ಡಾ. ಸಿದ್ದಯ್ಯ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗವಾಗಿದೆಯೇ ಎಂಬುದನ್ನು ಪರಿಶೀಲಿಸಿ, ತಪ್ಪಿತಸ್ಥರು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ, ಅರ್ಹ ಮತ್ತು ಅನರ್ಹ ಅಭ್ಯರ್ಥಿಗಳ ವಿವರ, ಪರೀಕ್ಷಾ ಕೇಂದ್ರಗಳ ಹಂಚಿಕೆ ಹಾಗೂ ಬದಲಾವಣೆಗೆ ಸಂಬಂಧಿಸಿದ ಆದೇಶಗಳು, ಅಧಿಕಾರಿಗಳ ಶಿಫಾರಸು ಪತ್ರಗಳು, ಪರೀಕ್ಷಾ ಮೇಲ್ವಿಚಾರಕರ ಮಾಹಿತಿ, ಪ್ರಶ್ನೆಪತ್ರಿಕೆಗಳು, ಒಎಂಆರ್ ಉತ್ತರ ಪತ್ರಿಕೆಗಳು, ಹಾಜರಾತಿ ದಾಖಲೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳಿದರು.

ಅಲ್ಲದೆ, ಅಭ್ಯರ್ಥಿಗಳ ಲಿಖಿತ ಪರೀಕ್ಷೆಯ ಅಂಕಗಳು, ಸಂದರ್ಶನದ ಅಂಕಪಟ್ಟಿ, ಸ್ಕೋರ್ ಕಾರ್ಡ್, ಆಯ್ಕೆ ಸಮಿತಿಯ ನಡಾವಳಿಗಳು, ಅಂತಿಮ ಆಯ್ಕೆ ಪಟ್ಟಿ, ನಿರೀಕ್ಷಣಾ ಪಟ್ಟಿ, ಪ್ರಮಾಣಪತ್ರ ಪರಿಶೀಲನೆ ದಾಖಲೆಗಳು, ನೇಮಕಾತಿ ಆದೇಶಗಳು ಹಾಗೂ ಆಡಳಿತ ಮಂಡಳಿ ಸಭೆಯ ನಿರ್ಣಯಗಳನ್ನು ಪರಿಶೀಲಿಸಬೇಕು. ಪ್ರತಿಯೊಬ್ಬ ಆಯ್ಕೆಯಾದ ಅಭ್ಯರ್ಥಿಯ ಅರ್ಹತೆ ಮತ್ತು ಪಡೆದ ಅಂಕಗಳ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗ ಹಾಗೂ ವಿವಿಧ ಹಿಂದುಳಿದ ವರ್ಗಗಳ ಮೀಸಲಾತಿಯ ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶದ ಮೀಸಲಾತಿ, ಗ್ರಾಮೀಣ, ಮಹಿಳಾ, ಕನ್ನಡ ಮಾಧ್ಯಮ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅನ್ವಯವಾಗುವ ಸಮತಲ ಮೀಸಲಾತಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿದೆಯೇ ಎಂಬುದನ್ನೂ ತನಿಖೆ ನಡೆಸಬೇಕು. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಡಬ್ಲ್ಯು.ಪಿ. ಸಂಖ್ಯೆ 4019/2026 (GM-RES-PIL) ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದ ಅವರು, ಪ್ರಕರಣ ನ್ಯಾಯಾಂಗದ ಗಮನಕ್ಕೂ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಮುಂದಾಗಬೇಕು ಎಂದರು.

ಆರೋಪಗಳಿಗೆ ಸಂಬಂಧಿಸಿದ ಅಧಿಕಾರಿಗಳು ವಿಶ್ವವಿದ್ಯಾಲಯದ ಉನ್ನತ ಹುದ್ದೆಗಳಲ್ಲಿ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪ್ರಭಾವ ಹೊಂದಿರುವುದರಿಂದ ತನಿಖೆಯ ಮೇಲೆ ಯಾವುದೇ ಒತ್ತಡ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ತನಿಖೆ ಪೂರ್ಣಗೊಳ್ಳುವವರೆಗೆ ಕರ್ತವ್ಯದಿಂದ ದೂರವಿಟ್ಟು, ದಾಖಲೆಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಲೋಕಾಯುಕ್ತ, ಸ್ವತಂತ್ರ ಉನ್ನತ ಮಟ್ಟದ ತನಿಖಾ ಸಂಸ್ಥೆ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು. ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ನಿಯಮಬಾಹಿರ ನೇಮಕಾತಿಗಳನ್ನು ರದ್ದುಗೊಳಿಸಬೇಕು. ಅರ್ಹತೆ ಮತ್ತು ಪ್ರತಿಭೆಯ ಆಧಾರದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿರೂಪಾಕ್ಷಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ವಿಕ್ರಂ ಗೋಸ್ವಾಮಿ, ಆದಿ ರೈ, ಎ. ರಾಮು, ಶರಣಪ್ಪಗೌಡ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.