ರಾಯಚೂರು: ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವೈಯಕ್ತಿಕ ಸ್ವಚ್ಛತೆ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸ್ವಚ್ಛ ಕೈಗಳು ಅನೇಕ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ನೀಡುತ್ತವೆ ಎಂದು ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದಕುಮಾರ್ ತಿಳಿಸಿದರು.
ತಾಲೂಕಿನ ಬಿಚ್ಚಾಲಿ ಗ್ರಾಮದ ಬೃಂದಾವನ ಆಹಾರ ಉತ್ಪಾದನಾ ಘಟಕದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಲಿಂಡ್ಸ್ಟ್ರೋಮ್ ಹಾಗೂ ಬಿಚ್ಚಾಲಿಯ ಬೃಂದಾವನ ಮಹಿಳಾ ಸ್ವಸಹಾಯ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಕೈ ತೊಳೆಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಅಕ್ಟೋಬರ್ 15ರಂದು ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ 'BE A HANDWASHING HERO' (ಕೈ ತೊಳೆಯುವ ನಾಯಕರಾಗಿ) ಎಂಬ ಘೋಷವಾಕ್ಯವು ಮನೆ, ಶಾಲೆ, ಕೆಲಸದ ಸ್ಥಳ ಹಾಗೂ ಸಮುದಾಯದಲ್ಲಿ ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಪ್ರತಿಯೊಬ್ಬರೂ ಸ್ವಚ್ಛತೆಯ ಮಹತ್ವ ಅರಿತು ಇತರರಿಗೂ ಮಾದರಿಯಾಗಬೇಕು ಎಂದು ಹೇಳಿದರು.
2008ರಲ್ಲಿ ಗ್ಲೋಬಲ್ ಹ್ಯಾಂಡ್ವಾಷಿಂಗ್ ಪಾರ್ಟ್ನರ್ಶಿಪ್ ವತಿಯಿಂದ ಜಾಗತಿಕ ಕೈ ತೊಳೆಯುವ ದಿನಾಚರಣೆಗೆ ಚಾಲನೆ ನೀಡಲಾಯಿತು. ಅಂದಿನಿಂದ ವಿಶ್ವದಾದ್ಯಂತ ಕೈ ತೊಳೆಯುವ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವೈಯಕ್ತಿಕ ಸ್ವಚ್ಛತೆಯೊಂದಿಗೆ ಸಮುದಾಯದ ಆರೋಗ್ಯ ರಕ್ಷಣೆಯಲ್ಲಿಯೂ ಕೈ ತೊಳೆಯುವ ಅಭ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.
ದಿನನಿತ್ಯದ ಕೆಲಸಗಳನ್ನು ಮುಗಿಸಿದ ನಂತರ, ಆಹಾರ ಸೇವಿಸುವ ಮೊದಲು, ಅಡುಗೆ ಮಾಡುವಾಗ, ತರಕಾರಿ ಕತ್ತರಿಸುವ ಮೊದಲು, ಶೌಚಾಲಯ ಬಳಸಿದ ನಂತರ ಹಾಗೂ ಮಕ್ಕಳ ಆರೈಕೆಯ ಸಂದರ್ಭದಲ್ಲಿ ತಪ್ಪದೇ ಸಾಬೂನು ಮತ್ತು ನೀರಿನಿಂದ ಕೈ ತೊಳೆಯಬೇಕು. ವಿಶೇಷವಾಗಿ ಮಕ್ಕಳಿಗೆ ಬಾಲ್ಯದಿಂದಲೇ ಆರು ಹಂತಗಳಲ್ಲಿ ಕೈ ತೊಳೆಯುವ ಸರಿಯಾದ ವಿಧಾನವನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು ಅತಿಸಾರ, ನ್ಯುಮೋನಿಯಾ ಸೇರಿದಂತೆ ವಿವಿಧ ಸೋಂಕುಗಳ ಹರಡುವಿಕೆಯನ್ನು ತಡೆಗಟ್ಟಲು ಪರಿಣಾಮಕಾರಿ ಹಾಗೂ ಕಡಿಮೆ ವೆಚ್ಚದ ವಿಧಾನವಾಗಿದೆ. ಅಧ್ಯಯನಗಳ ಪ್ರಕಾರ ನಿಯಮಿತವಾಗಿ ಕೈ ತೊಳೆಯುವುದರಿಂದ ಅತಿಸಾರ ಸಂಬಂಧಿತ ಕಾಯಿಲೆಗಳ ಪ್ರಮಾಣವನ್ನು ಶೇ.23ರಿಂದ 40ರವರೆಗೆ ಹಾಗೂ ಸಾಮಾನ್ಯ ಉಸಿರಾಟದ ಸೋಂಕುಗಳನ್ನು ಶೇ.16ರಿಂದ 21ರವರೆಗೆ ಕಡಿಮೆ ಮಾಡಲು ಸಾಧ್ಯವಿದೆ ಎಂದು ಮಾಹಿತಿ ನೀಡಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ (wash) ಕಾರ್ಯಕ್ರಮದ ಸಂಯೋಜಕ ವಿನಾಯಕ್ ಆರ್. ಮಾತನಾಡಿ, ಕೈ ತೊಳೆಯುವುದು ಕೇವಲ ವೈಯಕ್ತಿಕ ಅಭ್ಯಾಸವಲ್ಲ, ಸಾರ್ವಜನಿಕ ಆರೋಗ್ಯ ರಕ್ಷಣೆಯ ಪ್ರಮುಖ ಭಾಗವಾಗಿದೆ. ಸೋಂಕುಗಳ ನಿಯಂತ್ರಣ ಹಾಗೂ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವವಿದೆ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು ಕಳೆದ 14 ವರ್ಷಗಳಿಂದ ಸಮುದಾಯ ಹಾಗೂ ಶಾಲಾ ಮಕ್ಕಳಲ್ಲಿ ಶುದ್ಧ ಕುಡಿಯುವ ನೀರಿನ ಬಳಕೆ, ಶೌಚಾಲಯಗಳ ಮಹತ್ವ, ಗ್ರಾಮ ನೈರ್ಮಲ್ಯ ಮತ್ತು ವೈಯಕ್ತಿಕ ಸ್ವಚ್ಛತೆಯ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ವರ್ಷ ಬೃಂದಾವನ ಆಹಾರ ಉತ್ಪಾದನಾ ಘಟಕದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ರೈತರು ಹಾಗೂ ಸ್ಥಳೀಯ ಸಮುದಾಯದವರನ್ನು ಒಗ್ಗೂಡಿಸಿ ಕೈ ತೊಳೆಯುವ ದಿನಾಚರಣೆಯನ್ನು ಆಯೋಜಿಸಲಾಗಿದೆ. ಆಹಾರ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ತೊಡಗಿರುವವರು ಕೈಗಳ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು. ಇದರಿಂದ ಆಹಾರ ಕಲುಷಿತಗೊಳ್ಳುವುದನ್ನು ತಡೆಯುವುದರ ಜೊತೆಗೆ ಗ್ರಾಹಕರ ಆರೋಗ್ಯವನ್ನೂ ಕಾಪಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಹಾಗೂ ಸ್ಥಳೀಯರಿಗೆ ಸಾಬೂನು ಬಳಸಿ ಆರು ಹಂತಗಳಲ್ಲಿ ಕೈ ತೊಳೆಯುವ ಸರಿಯಾದ ವಿಧಾನವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲಾಯಿತು. ಭಾಗವಹಿಸಿದವರಿಂದಲೂ ಕೈ ತೊಳೆಯುವ ಅಭ್ಯಾಸವನ್ನು ಮಾಡಿಸುವ ಮೂಲಕ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಮತ್ತೊಬ್ಬ ಅತಿಥಿ ಗಿಲ್ಲೆಸೂಗೂರು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ್ ಕುಮಾರ್ ಮಾತನಾಡಿ, ಮಲೇರಿಯಾ, ಡೆಂಗ್ಯೂ ಹಾಗೂ ಕ್ಷಯರೋಗದ ಕುರಿತು ಮಾಹಿತಿ ನೀಡಿದರು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸೊಳ್ಳೆಗಳ ಉತ್ಪತ್ತಿ ತಡೆಗಟ್ಟುವುದು ಹಾಗೂ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಆರೋಗ್ಯಕರ ಜೀವನಕ್ಕೆ ಸ್ವಚ್ಛತೆ ಮೂಲಮಂತ್ರವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಕಾವ್ಯ, ಲಿಂಗಪ್ಪ, ಈರಣ್ಣ, ಲಿಂಗಪ್ಪ ಕುರ್ಡಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾದ ಅಶ್ವಿನಿ, ರೇಷ್ಮಾ, ರೆಹೇನಾ, ರಾಧಾ, ಗಂಗಮ್ಮ, ನಾಗವೇಣಿ, ರಶೀದಾ ಬೇಗಂ ಸೇರಿದಂತೆ ಸ್ಥಳೀಯ ಮಹಿಳೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.



