ಶಕ್ತಿನಗರ: ಕೆಲಸದ ಒತ್ತಡ ಪ್ರತಿಯೊಬ್ಬರ ವೃತ್ತಿಜೀವನದಲ್ಲಿಯೂ ಸಹಜವಾಗಿ ಎದುರಾಗುತ್ತದೆ. ಆದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಸೂಕ್ತ ರೀತಿಯಲ್ಲಿ ನಿರ್ವಹಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಡಾ. ಮನೋಹರ್ ವೈ. ಪತ್ತಾರ ಸಲಹೆ ನೀಡಿದರು.

ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಆಸ್ಪತ್ರೆ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ–2026ರ ಅಂಗವಾಗಿ ಅಕ್ಟೋಬರ್ 16ರಂದು ಸ್ಥಾವರದ ಹಸಿರು ಸೌಧ ಸಭಾಂಗಣದಲ್ಲಿ ಉದ್ಯೋಗಿಗಳಿಗಾಗಿ ಆಯೋಜಿಸಿದ್ದ ‘ಕಾರ್ಯಕ್ಷೇತ್ರದಲ್ಲಿ ಒತ್ತಡ ನಿರ್ವಹಣೆ ಮತ್ತು ವ್ಯಸನ ವಿಮೋಚನೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಜೀವನಶೈಲಿ ಹಾಗೂ ಕೆಲಸದ ಜವಾಬ್ದಾರಿಗಳಿಂದಾಗಿ ಉದ್ಯೋಗಿಗಳು ವಿವಿಧ ರೀತಿಯ ಮಾನಸಿಕ ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾಗದೆ, ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಮಾನಸಿಕ ಒತ್ತಡದ ಆರಂಭಿಕ ಲಕ್ಷಣಗಳನ್ನು ಗುರುತಿಸಿ, ಸಮಯಕ್ಕೆ ಸರಿಯಾಗಿ ಪರಿಹಾರ ಕಂಡುಕೊಳ್ಳುವುದರಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಮಾನಸಿಕ ಒತ್ತಡದಿಂದ ಹೊರಬರಲು ಧೂಮಪಾನ, ಮದ್ಯಪಾನ ಸೇರಿದಂತೆ ದುಶ್ಚಟಗಳ ಮೊರೆಹೋಗುವುದು ಸರಿಯಾದ ಮಾರ್ಗವಲ್ಲ. ಇಂತಹ ಅಭ್ಯಾಸಗಳು ತಾತ್ಕಾಲಿಕ ನೆಮ್ಮದಿ ನೀಡುವಂತೆ ಕಂಡರೂ, ಕ್ರಮೇಣ ವ್ಯಸನಕ್ಕೆ ಕಾರಣವಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಉದ್ಯೋಗಿಗಳು ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಿಯಮಿತ ವ್ಯಾಯಾಮ, ಯೋಗಾಭ್ಯಾಸ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಸಂಗೀತ ಆಲಿಸುವುದು ಹಾಗೂ ಸೃಜನಶೀಲ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಕುಟುಂಬದ ಸದಸ್ಯರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಹಾಗೂ ಅಗತ್ಯವಿದ್ದಾಗ ವೈದ್ಯಕೀಯ ಸಲಹೆ ಪಡೆಯುವುದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಕಾರ್ಯನಿರ್ವಾಹಕ ನಿರ್ದೇಶಕ ಯತಿರಾಜ್ ಮಾತನಾಡಿ, ಉದ್ಯೋಗಿಗಳು ವೈಯಕ್ತಿಕ ಶಿಸ್ತು, ಸಮಯಪ್ರಜ್ಞೆ ಹಾಗೂ ವೃತ್ತಿಪರತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೃತ್ತಿಯ ಜತೆಗೆ ಉತ್ತಮ ಪ್ರವೃತ್ತಿ ಹಾಗೂ ಹವ್ಯಾಸಗಳಿಗೂ ಆದ್ಯತೆ ನೀಡಬೇಕು. ಉದ್ಯೋಗಿಗಳು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸದೃಢರಾಗಿರಬೇಕು ಎಂಬ ಉದ್ದೇಶದಿಂದ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬ ಉದ್ಯೋಗಿಯೂ ತನ್ನ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ಮಾನಸಿಕ ನೆಮ್ಮದಿ, ಶಿಸ್ತು ಹಾಗೂ ಸಕಾರಾತ್ಮಕ ಚಿಂತನೆಗಳು ವೈಯಕ್ತಿಕ ಜೀವನದ ಜತೆಗೆ ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವೈಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣರಾಜ್ ಕೆ.ಕೆ., ಮುಖ್ಯ ಅಭಿಯಂತರರಾದ ಜಯಲಲಿತಾ, ಅಜಯ್ ಟಿ.ಪಿ., ಮುಖ್ಯ ವೈದ್ಯಕೀಯ ಅಧೀಕ್ಷಕಿ ಡಾ. ಪ್ರೇಮಲತಾ, ಡಾ. ರಮೇಶ್, ಮಾನವ ಸಂಪನ್ಮೂಲ ವಿಭಾಗದ ಉಪಪ್ರಧಾನ ವ್ಯವಸ್ಥಾಪಕಿ ಚನ್ನಬಸಮ್ಮ, ಕಾರ್ಮಿಕ ಮುಖಂಡರಾದ ಗುರುರಾಜ್ ಅಂಬಿಗೇರ, ಭೀಮಯ್ಯ ನಾಯಕ, ಗೌತಮ್ ಕಟ್ಟಿಮನಿ, ನರಸಪ್ಪ ಭೂತಪಲ್ಲಿ, ರಘುನಾಥ್ ರೆಡ್ಡಿ, ರಾಮಪ್ಪ, ಸುರಕ್ಷತಾ ವಿಭಾಗದ ನಾಗರಾಜು ಸೇರಿದಂತೆ ಮಹಿಳಾ ಉದ್ಯೋಗಿಗಳು, ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಗುತ್ತಿಗೆ ಕಾರ್ಮಿಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಡಾ. ಮಲ್ಲಿಕಾರ್ಜುನಯ್ಯ ನಿರೂಪಿಸಿದರು.