ರಾಯಚೂರು: ನಗರದ ಕಿಲ್ಲೇ ಬೃಹನ್ಮಠದಲ್ಲಿ ಪೀಠಾಧಿಪತಿ ಪೂಜ್ಯ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ 88ನೇ ವರ್ಷದ ಶ್ರೀದೇವಿ ಮಹಾಪುರಾಣ ಪ್ರವಚನದ ಆರನೇ ದಿನದ ಕಾರ್ಯಕ್ರಮವು ಶುಕ್ರವಾರ ಭಕ್ತಿಭಾವದಿಂದ ಜರುಗಿತು. ಈ ಸಂದರ್ಭದಲ್ಲಿ ವಿಶೇಷ ಪೂಜೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.

ಪುರಾಣ ಪ್ರವಚನಕಾರರಾದ ಬಳಗಾನೂರಿನ ಕಂಬಾಳಿಮಠದ ವೇದಮೂರ್ತಿ ಪಂಡಿತ ಶರಭಯ್ಯ ಶಾಸ್ತ್ರಿಗಳು ಆರನೇ ದಿನದ ಶ್ರೀದೇವಿ ಮಹಾಪುರಾಣದ ಮಹತ್ವವನ್ನು ವಿವರಿಸಿದರು. ರಾಕ್ಷಸರ ಅತಿಯಾದ ಆಸೆ, ಅಹಂಕಾರ ಹಾಗೂ ದೇವತೆಗಳ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸಲು ಮಹಾಲಕ್ಷ್ಮಿ ಅವತಾರ ತಾಳಿ ದುಷ್ಟಶಕ್ತಿಗಳನ್ನು ಸಂಹರಿಸಿದ ಪ್ರಸಂಗವನ್ನು ತಿಳಿಸಿದರು.

ಪುರಾಣದಲ್ಲಿ ಬರುವ ರಾಕ್ಷಸರು ಮತ್ತು ದುಷ್ಟಶಕ್ತಿಗಳು ಮನುಷ್ಯನಲ್ಲಿರುವ ಕೆಟ್ಟ ಗುಣಗಳ ಸಂಕೇತವಾಗಿವೆ. ಅತಿಯಾದ ಆಸೆ, ಅಹಂಕಾರ, ಕ್ರೋಧ ಹಾಗೂ ದುಷ್ಟ ಆಲೋಚನೆಗಳನ್ನು ತೊರೆದು ಸನ್ಮಾರ್ಗದಲ್ಲಿ ನಡೆಯುವುದೇ ಪುರಾಣದ ಆಶಯವಾಗಿದೆ ಎಂದು ವಿವರಿಸಿದರು. ಪ್ರವಚನಕ್ಕೆ ಕಲಾವಿದರಾದ ಬ್ರಹ್ಮೇಂದ್ರ ಮಂಜರ್ಲಾ ಹಾಗೂ ಸುದರ್ಶನ ವಾದ್ಯಸಾಥ್ ನೀಡಿದರು.

ಬಳಿಕ ಧರ್ಮ ಸಂದೇಶ ನೀಡಿದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಶಾಂಭವಿ ಮಹಾಪುರಾಣದ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬುವುದು ವಿಶೇಷ ಧಾರ್ಮಿಕ ಮಹತ್ವ ಹೊಂದಿದೆ. ಉಡಿ ತುಂಬುವ ಸಂಪ್ರದಾಯವು ಸಾಕ್ಷಾತ್ ಮಹಾಲಕ್ಷ್ಮಿ ಹಾಗೂ ಅನ್ನಪೂರ್ಣೇಶ್ವರಿಯನ್ನು ಮನೆಗೆ ಆಹ್ವಾನಿಸಿದಂತೆ ಎಂಬ ನಂಬಿಕೆಯಿದೆ. ಮಹಿಳೆಯರನ್ನು ಗೌರವಿಸುವುದರಿಂದ ಜಗನ್ಮಾತೆ ಶಾಂಭವಿಯ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು.

ಶುಭ ಶುಕ್ರವಾರದ ಅಂಗವಾಗಿ ನಗರದ ಪೂರ್ಣಿಮಾ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷೆ ರೇಖಾ ಎಸ್.ಎಲ್. ಕೇಶವರೆಡ್ಡಿ ಅವರ ವತಿಯಿಂದ ಶ್ರೀಮಠದಲ್ಲಿ ನೂರಾರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕುಪ್ಪಸ, ಅರಿಶಿನ, ಕುಂಕುಮ, ಹಸಿರು ಬಳೆಗಳು ಹಾಗೂ ತಾಂಬೂಲವನ್ನು ಶ್ರೀಮಠದಲ್ಲಿ ಪ್ರತಿಷ್ಠಾಪಿಸಿರುವ ಬೆಳ್ಳಿಯ ಶಾಂಭವಿ ಮೂರ್ತಿಗೆ ಸಮರ್ಪಿಸಲಾಯಿತು. ಬಳಿಕ ಶ್ರೀಮಠದ ಸ್ವಾಮೀಜಿಗಳಿಗೆ ಸಾಂಕೇತಿಕವಾಗಿ ಉಡಿ ಅರ್ಪಿಸಿ, ನೆರೆದಿದ್ದ ನೂರಾರು ಮಹಿಳೆಯರಿಗೆ ಉಡಿ ತುಂಬಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಾಡಿನ ಜನತೆಗೆ ಜಗನ್ಮಾತೆ ಶಾಂಭವಿ ಒಳಿತನ್ನು ಕರುಣಿಸಲಿ. ಮಳೆಯ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಹಿಂಗಾರು ಮಳೆ ಆಸರೆಯಾಗಲಿ. ರೈತಾಪಿ ಕುಟುಂಬಗಳ ಬದುಕಿನಲ್ಲಿ ನೆಮ್ಮದಿ ಮೂಡಲಿ ಎಂದು ರೇಖಾ ಕೇಶವರೆಡ್ಡಿ ಪ್ರಾರ್ಥಿಸಿದರು.

ನಂತರ ಮಾತನಾಡಿದ ಎಸ್.ಎಲ್. ಕೇಶವರೆಡ್ಡಿ, ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿಗಳು ಜಾತಿ, ಧರ್ಮಗಳ ಭೇದವಿಲ್ಲದೆ ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ವರ್ಷವಿಡೀ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸಮಾಜದಲ್ಲಿ ಮಠಮಾನ್ಯಗಳು ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಜನರಲ್ಲಿ ಸಂಸ್ಕಾರ, ಮಾನವೀಯ ಮೌಲ್ಯ ಹಾಗೂ ಸೇವಾ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿವೆ. ಸರ್ಕಾರಗಳಿಂದ ಸಾಧ್ಯವಾಗದ ಕೆಲವು ಸಾಮಾಜಿಕ ಕಾರ್ಯಗಳನ್ನೂ ಮಠಗಳು ನಿರ್ವಹಿಸುತ್ತಿರುವುದು ಗಮನಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ಅರಿವು ಮೂಡಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಮೊಬೈಲ್ ಮತ್ತು ದೂರದರ್ಶನದ ಅತಿಯಾದ ಬಳಕೆಯಿಂದ ಮಕ್ಕಳನ್ನು ದೂರವಿರಿಸಿ, ಪುರಾಣ ಪ್ರವಚನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆತರುವ ಮೂಲಕ ಉತ್ತಮ ಸಂಸ್ಕಾರ ಬೆಳೆಸಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ನಾಡಿನ ಪರಂಪರೆ, ಆಚಾರ-ವಿಚಾರಗಳ ಪರಿಚಯವಾಗುತ್ತದೆ ಎಂದು ಹೇಳಿದರು.

ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವುದು ಭಕ್ತರಿಗೆ ವಿಶೇಷ ಅನುಭವ ನೀಡುತ್ತದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಮಠಗಳಿಗೆ ಭೇಟಿ ನೀಡಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರೇಖಾ ಎಸ್.ಎಲ್. ಕೇಶವರೆಡ್ಡಿ ಅವರು ಶ್ರೀಮಠದ ಸ್ವಾಮೀಜಿಗಳನ್ನು ಸನ್ಮಾನಿಸಿ ಗೌರವಿಸಿದರು. ಪ್ರತಿಯಾಗಿ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿಗಳು ಅವರನ್ನು ಸನ್ಮಾನಿಸಿ ಶುಭಾಶೀರ್ವಾದ ನೀಡಿದರು. ಇದೇ ವೇಳೆ ಪ್ರಸಾದ ಸೇವೆ ಸಲ್ಲಿಸಿದ ಭಕ್ತರು ಹಾಗೂ ಗಣ್ಯರನ್ನು ಗೌರವಿಸಲಾಯಿತು.

ಚಿಕ್ಕ ಮಕ್ಕಳಿಂದ ನಡೆದ ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಭಕ್ತರ ಗಮನ ಸೆಳೆದವು.

ಈ ಸಂದರ್ಭದಲ್ಲಿ ಶ್ರೀಮಠದ ಪ್ರಧಾನ ಕಾರ್ಯದರ್ಶಿ ವೇದಮೂರ್ತಿ ರೇಣುಕಾರಾಧ್ಯಯ್ಯ ಸ್ವಾಮಿ, ವೇದಮೂರ್ತಿ ಸೋಮೇಶ್ವರ ಪ್ರಸಾದ, ಶ್ರವಣಕುಮಾರ, ವೀರೇಶ ಆಲ್ಕೋಡಮಠ, ಶ್ರೀನಾಥ, ಉಮೇಶ, ಮಹೇಶ ಸೇರಿದಂತೆ ಶ್ರೀಮಠದ ಶಿಷ್ಯವೃಂದ, ಕಾರ್ಯಕರ್ತರು, ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಉಪಸ್ಥಿತರಿದ್ದರು.