ರಾಯಚೂರು ಅ. 17 (ಕರ್ನಾಟಕ ವಾರ್ತೆ): ಹಾಸ್ಟೆಲ್‌ಗಳಲ್ಲಿ ಅಡುಗೆ ತಯಾರಿಸುವಾಗ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ವಿದ್ಯಾರ್ಥಿಗಳಿಗೆ ಗುಣಮಟ್ಟದ, ಶುಚಿ ಹಾಗೂ ರುಚಿಯಾದ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತರಬೇತಿಯಲ್ಲಿ ನೀಡಲಾದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು.

ಅಕ್ಟೋಬರ್ 17ರ ಶನಿವಾರ ದಂದು ರಾಯಚೂರು ನಗರದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕ್ರೈಸ್ ವಸತಿ ಶಾಲೆಯ ಅಧೀನದಲ್ಲಿರುವ ಖಾಯಂ / ಹೊರ ಸಂಪನ್ಮೂಲ ಡಿ-ಗ್ರೂಪ್ ಸಿಬ್ಬಂದಿಗಳಿಗೆ ಅಡುಗೆ ತಯಾರಿಸುವ ಮತ್ತು ಸ್ವಚ್ಛತೆಯನ್ನು ಕಾಪಾಡುವ ಕುರಿತು ಮೂರನೇಯ ದಿನದ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಅಡುಗೆ ಮಾಡುವಷ್ಟೇ ಕಾಳಜಿ, ಶುಚಿತ್ವ ಮತ್ತು ಜವಾಬ್ದಾರಿಯಿಂದ ಹಾಸ್ಟೆಲ್ ಮಕ್ಕಳಿಗೂ ಅಡುಗೆ ಮಾಡಬೇಕು. ಒಂದು ವೇಳೆ ಯಾವುದಾದರೂ ಪದಾರ್ಥ ಖಾಲಿಯಾದರೆ ಮತ್ತೊಂದು ಪದಾರ್ಥವನ್ನು ಬಳಸುವಾಗ ಅಥವಾ ಬದಲಾಯಿಸುವಾಗ ಅದರ ಸಾಧಕ-ಬಾಧಕಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಹಾಸ್ಟೆಲ್‌ನಲ್ಲಿ ಸಾವಿರಾರು ಮಕ್ಕಳಿಗೆ ಒಟ್ಟಾಗಿ ಅಡುಗೆ ಮಾಡುವಾಗ ಸಣ್ಣ ಪ್ರಮಾದವಾದರೂ ಅದು ಒಬ್ಬರಿಗೆ ಮಾತ್ರ ಸೀಮಿತವಾಗದೆ, ಇಡೀ ಹಾಸ್ಟೆಲ್ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ನಡೆದ ಕೆಲವು ಸಣ್ಣಪುಟ್ಟ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಭವಿಷ್ಯದಲ್ಲಿ ಇಂತಹ ಯಾವುದೇ ಲೋಪಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ ಎಂದರು. ಕೇವಲ ಮಾತಿಗೆ ಅಥವಾ ಸೂಚನೆಗೆ ಮಾತ್ರ ಸೀಮಿತಗೊಳ್ಳದೆ, ಪ್ರತಿ ಆರು ತಿಂಗಳಿಗೊಮ್ಮೆ ನಿಯಮಿತವಾಗಿ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಉತ್ತಮ ಕಾರ್ಯಕ್ಷಮತೆ ಹೊಂದಿರುವ ಹಾಸ್ಟೆಲ್‌ಗಳನ್ನು ಗುರುತಿಸಿ, ಅಲ್ಲಿನ ಸಿಬ್ಬಂದಿಯನ್ನು ಇತರರಿಗೆ ಮಾದರಿಯಾಗಿ ಪರಿಚಯಿಸಲು ತರಬೇತಿ ನೀಡಲಾಗುವುದು ಎಂದರು.

ಯಾವುದೇ ಹಂತದಲ್ಲಿಯೂ ಸಿಬ್ಬಂದಿಯಿAದ ನಿರ್ಲಕ್ಷ್ಯ ಅಥವಾ ತಪ್ಪುಗಳು ಆಗಬಾರದು. ಒಂದು ವೇಳೆ ದೂರುಗಳು ಬಂದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು, ಯಾವುದೇ ದೂರುಗಳು ಇಲ್ಲದಿದ್ದರೆ ಇಲಾಖೆಯಿಂದ ಸಂಪೂರ್ಣ ಬೆಂಬಲವಿರುತ್ತದೆ.

ಇದೇ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ನಂದಿತಾ ಎಮ್.ಎನ್., ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರವೀಣ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುನೀತಾ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ವಸತಿ ಶಾಲೆಯ ಪ್ರಾಂಶುಪಾಲರು, ನಿಲಯ ಪಾಲಕರು, ಅಡುಗೆ ಸಿಬ್ಬಂದಿಗಳು, ಸಹಾಯಕರು ಇದ್ದರು.