ರಾಯಚೂರು: ನಗರದ ಆಶಾಪೂರ ರಸ್ತೆಯ ಮಲ್ಲಿಕಾರ್ಜುನ ಬಡಾವಣೆಯ ಶ್ರೀ ಏಳು ಮಕ್ಕಳ ತಾಯಾಂಭಿಕೆ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಏಳನೇ ದಿನದ ಅಂಗವಾಗಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ದೇವಸ್ಥಾನದ ಅಧ್ಯಕ್ಷ ಮರಿಗೌಡ ಪೊಲೀಸ್ ಪಾಟೀಲ ಹಾಗೂ ಸೇವಾ ಸಮಿತಿಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರಣಾಂಗ್ಷು ಗಿರಿ ಮತ್ತು ಮಹಾನಗರ ಪಾಲಿಕೆ ಆಯುಕ್ತ ಜುಬೀನ್ ಮೋಹಪಾತ್ರ ಅವರು ಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ಏಳು ಮಕ್ಕಳ ತಾಯಾಂಭಿಕೆಯ ದರ್ಶನ ಪಡೆದು ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರಣಾಂಗ್ಷು ಗಿರಿ, ನಗರದ ಹೊರವಲಯದಲ್ಲಿರುವ ಬಡಾವಣೆಗಳಲ್ಲಿ ಮನೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದರಿಂದ ಕಳ್ಳತನ ಸೇರಿದಂತೆ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಸಾಮಾನ್ಯವಾಗಿ ₹2,500ರಿಂದ ₹5,000 ವೆಚ್ಚದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ. ಇದು ಪೊಲೀಸ್ ಇಲಾಖೆಯ ಆದೇಶವಲ್ಲ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮಾಡುತ್ತಿರುವ ಮನವಿ. ವ್ಯಕ್ತಿಯ ಆಸ್ತಿ ಎಷ್ಟೇ ದೊಡ್ಡದಾಗಿದ್ದರೂ ಜೀವ ಮತ್ತು ಕುಟುಂಬದ ಸುರಕ್ಷತೆ ಅತ್ಯಂತ ಮುಖ್ಯ. ಪ್ರತಿಯೊಂದು ಮನೆಯಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಿದರೆ ಇಡೀ ಬಡಾವಣೆಯ ಭದ್ರತೆ ಬಲಗೊಳ್ಳುತ್ತದೆ ಎಂದು ತಿಳಿಸಿದರು.
ಹಬ್ಬ, ಕುಟುಂಬ ಸಮಾರಂಭ ಅಥವಾ ಇತರ ಕಾರಣಗಳಿಂದ ಮನೆಗೆ ಬೀಗ ಹಾಕಿ ಬೇರೆ ಊರಿಗೆ ತೆರಳುವ ಸಂದರ್ಭದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮುಂಚಿತವಾಗಿ ಮಾಹಿತಿ ನೀಡಿ ಮನವಿ ಸಲ್ಲಿಸಬೇಕು. ಇದರಿಂದ ಪೊಲೀಸ್ ಸಿಬ್ಬಂದಿ ಅಂತಹ ಮನೆಗಳ ಮೇಲೆ ವಿಶೇಷ ನಿಗಾ ವಹಿಸಲು ಅನುಕೂಲವಾಗುತ್ತದೆ. ಸಾರ್ವಜನಿಕರ ಸಹಕಾರದಿಂದ ಅಪರಾಧಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಜುಬೀನ್ ಮೋಹಪಾತ್ರ ಮಾತನಾಡಿ, ನಗರವನ್ನು ಸ್ವಚ್ಛವಾಗಿಡುವುದು ಕೇವಲ ಪಾಲಿಕೆ ಮತ್ತು ಪೌರಕಾರ್ಮಿಕರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕರೂ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಸ್ವಚ್ಛ ಹಾಗೂ ಸುಂದರ ನಗರ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿ ಸುಮಾರು 35 ಎಕರೆ ಖಾಲಿ ಜಾಗವನ್ನು ಗುರುತಿಸಲಾಗಿದ್ದು, ನಗರದಲ್ಲಿ ಪ್ರತಿದಿನ ಸಂಗ್ರಹವಾಗುವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರು ಮನೆಯ ಕಸವನ್ನು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಎಸೆಯದೆ, ಪಾಲಿಕೆ ನಿಗದಿಪಡಿಸಿರುವ ಕಸದ ತೊಟ್ಟಿಗಳಲ್ಲಿ ಹಾಕಬೇಕು. ಸ್ವಚ್ಛತೆಯ ಕಾರ್ಯದಲ್ಲಿ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮಲ್ಲಿಕಾರ್ಜುನ ಬಡಾವಣೆಯ ನಿವಾಸಿಗಳು ಕುಟುಂಬ ಸಮೇತರಾಗಿ ಆಹ್ವಾನಿಸಿ ಆತ್ಮೀಯವಾಗಿ ಗೌರವಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ನವರಾತ್ರಿಯ ಒಂಬತ್ತು ದಿನಗಳ ಕಾಲ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಇಂತಹ ವೇದಿಕೆಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ನೆರವಾಗುತ್ತವೆ. ಮುಂದಿನ ದಿನಗಳಲ್ಲಿ ಬಡಾವಣೆಗೆ ಅಗತ್ಯ ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ಆದಷ್ಟು ಶೀಘ್ರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾ ಶಾವಂತಗೇರಿ, ನಗರದ ಹೊರವಲಯದಲ್ಲಿರುವ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿರುವುದು ನಿವಾಸಿಗಳಿಗೆ ಸಂತಸ ತಂದಿದೆ ಎಂದರು.
ಬಡಾವಣೆಯಲ್ಲಿ ರಸ್ತೆ, ಒಳಚರಂಡಿ ಹಾಗೂ ಇತರ ಮೂಲಸೌಕರ್ಯಗಳ ಕೊರತೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಬೇಕು. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಹಾಗೂ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮಲ್ಲಿಕಾರ್ಜುನ ಬಡಾವಣೆಯಲ್ಲಿ ವಿವಿಧ ಧರ್ಮಗಳ ಜನರು ಸಹೋದರತ್ವ ಮತ್ತು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದು, ವರ್ಷವಿಡೀ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಗ್ಗಟ್ಟಿನಿಂದ ಆಯೋಜಿಸುತ್ತಿದ್ದಾರೆ. ಇಂತಹ ಬಡಾವಣೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ದೇವಸ್ಥಾನದ ನವದುರ್ಗೆಯರ ಮಹಿಳಾ ತಂಡದಿಂದ ಪ್ರಸ್ತುತಪಡಿಸಿದ ಶಾಂಭವಿ ಭಕ್ತಿಗೀತೆಯ ಕೋಲಾಟವು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಬಳಿಕ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಮಕ್ಕಳು ಕರೋಕೆ ಹಾಡುಗಳನ್ನು ಹಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರಣಾಂಗ್ಷು ಗಿರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಜುಬೀನ್ ಮೋಹಪಾತ್ರ ಅವರನ್ನು ದೇವಸ್ಥಾನದ ಸೇವಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ನಂತರ ನೂರಾರು ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.
ಮಲ್ಲಿಕಾರ್ಜುನ ಬಡಾವಣೆ ನಿವಾಸಿಗಳ ಸಂಘದ ಪದಾಧಿಕಾರಿಗಳು, ದೇವಸ್ಥಾನದ ಅಧ್ಯಕ್ಷ ಮರಿಗೌಡ ಪೊಲೀಸ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರೆಡ್ಡಿ, ಅಣ್ಣರಾವ ನಾಯಕ, ನರಸಪ್ಪ, ನವದುರ್ಗೆಯರ ಸಂಘದ ಶೃತಿ, ಉಮಾಮಹೇಶ್ವರಿ, ಪದ್ಮಾ, ಶೈಲಜಾ, ಸುನಂದಾ, ಪ್ರಿಯಾ, ಕಾವ್ಯಾ, ಸಿರೀಶಾ, ಅರಣಾ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.



