ರಾಯಚೂರು: ರಾಯಚೂರು ವಿಮಾನ ನಿಲ್ದಾಣಕ್ಕೆ ಸಾಮ್ರಾಟ್ ಅಶೋಕ ಚಕ್ರವರ್ತಿ ಅವರ ಹೆಸರನ್ನು ನಾಮಕರಣ ಮಾಡಬೇಕು. ಅಲ್ಲದೆ, ವಿಜಯದಶಮಿಯನ್ನು ಬೌದ್ಧ ಧಮ್ಮ ಪ್ರವರ್ತನ ದಿನವನ್ನಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಚರಿಸಬೇಕು ಎಂದು ವಕೀಲ ಎಸ್. ಮಾರಪ್ಪ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 21ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿ ವಿಜಯದಶಮಿ ಹಾಗೂ ಧಮ್ಮ ಪ್ರವರ್ತನ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಳಿಂಗ ಯುದ್ಧದ ಭೀಕರ ರಕ್ತಪಾತದಿಂದ ಮನನೊಂದ ಸಾಮ್ರಾಟ್ ಅಶೋಕ ಚಕ್ರವರ್ತಿಯವರು ಯುದ್ಧದ ಮಾರ್ಗವನ್ನು ತ್ಯಜಿಸಿ ಬೌದ್ಧ ಧಮ್ಮದ ಶಾಂತಿ, ಅಹಿಂಸೆ, ಕರುಣೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರು. ತಮ್ಮ ಆಡಳಿತದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಜನಕಲ್ಯಾಣಕ್ಕೆ ಆದ್ಯತೆ ನೀಡುವ ಮೂಲಕ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.
1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮವನ್ನು ಸ್ವೀಕರಿಸಿ ನವಯಾನ ಬೌದ್ಧ ಚಳವಳಿಗೆ ಚಾಲನೆ ನೀಡಿದರು. ಈ ಐತಿಹಾಸಿಕ ಘಟನೆಯ ಸ್ಮರಣಾರ್ಥ ಬೌದ್ಧ ಧಮ್ಮದ ಅನುಯಾಯಿಗಳು ವಿಜಯದಶಮಿಯನ್ನು ಧಮ್ಮದೀಕ್ಷಾ ದಿನವನ್ನಾಗಿ ಆಚರಿಸುತ್ತಾರೆ. ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಹಾಗೂ ಸಾಮಾಜಿಕ ನ್ಯಾಯದ ಸಂದೇಶವನ್ನು ಜನರಿಗೆ ತಲುಪಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ಬೌದ್ಧ ಧಮ್ಮವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಮಾನವೀಯತೆ, ವೈಚಾರಿಕತೆ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಪ್ರತಿಪಾದಿಸುತ್ತದೆ. ಮನುಷ್ಯ, ಪ್ರಾಣಿ ಮತ್ತು ಪ್ರಕೃತಿಯ ಯೋಗಕ್ಷೇಮಕ್ಕೆ ಮಹತ್ವ ನೀಡುವ ಬೌದ್ಧ ತತ್ವಗಳು ಇಂದಿನ ಸಮಾಜಕ್ಕೂ ಅತ್ಯಂತ ಅಗತ್ಯವಾಗಿವೆ. ಜಾತಿ ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ತೊಡೆದುಹಾಕಿ ಸಮಾನತೆಯ ಸಮಾಜ ನಿರ್ಮಿಸಲು ಬುದ್ಧನ ಸಂದೇಶಗಳು ಮಾರ್ಗದರ್ಶಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿರುವ ಸಾಮ್ರಾಟ್ ಅಶೋಕರ ಶಾಸನವು ಜಾಗತಿಕ ಐತಿಹಾಸಿಕ ಮಹತ್ವ ಹೊಂದಿದೆ. 1915ರಲ್ಲಿ ಸಿ. ಬೀಡನ್ ಅವರು ಪತ್ತೆಹಚ್ಚಿದ ಈ ಶಾಸನವು ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿದ್ದು, 'ದೇವನಾಂಪ್ರಿಯಸ್ಯ ಅಶೋಕಸ್ಯ' ಎಂಬ ಉಲ್ಲೇಖದ ಮೂಲಕ ಅಶೋಕನ ಗುರುತನ್ನು ದೃಢಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ಶತಮಾನಕ್ಕೂ ಹೆಚ್ಚು ಕಾಲ ಕಳೆದರೂ ಈ ಐತಿಹಾಸಿಕ ಸ್ಥಳದ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮರ್ಪಕ ಆದ್ಯತೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಸ್ಕಿಯ ಅಶೋಕ ಶಾಸನವು ರಾಯಚೂರು ಜಿಲ್ಲೆಯ ಹೆಮ್ಮೆಯ ಸಂಕೇತವಾಗಿರುವುದರಿಂದ ರಾಯಚೂರು ವಿಮಾನ ನಿಲ್ದಾಣಕ್ಕೆ ಸಾಮ್ರಾಟ್ ಅಶೋಕ ಚಕ್ರವರ್ತಿ ಹೆಸರನ್ನು ನಾಮಕರಣ ಮಾಡಬೇಕು. ಇದರಿಂದ ಜಿಲ್ಲೆಯ ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸಿದಂತಾಗುವುದಲ್ಲದೆ, ಮಸ್ಕಿಯ ಶಾಸನದ ಮಹತ್ವವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಸಹಕಾರಿಯಾಗಲಿದೆ. ಈ ಕುರಿತು ಜಿಲ್ಲಾಡಳಿತವು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿವರ್ಷ ವಿಜಯದಶಮಿಯನ್ನು ಧಮ್ಮ ಪ್ರವರ್ತನ ದಿನವನ್ನಾಗಿ ಸರ್ಕಾರ ಅಧಿಕೃತವಾಗಿ ಆಚರಿಸಬೇಕು. ಅಕ್ಟೋಬರ್ 21ರಂದು ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅನುಯಾಯಿಗಳು, ಬೌದ್ಧ ಧಮ್ಮದ ಉಪಾಸಕರು, ದಲಿತ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನರಸಿಂಹಲು ಮರ್ಚೆಟಹಾಳ್, ಆಂಜಿನಯ್ಯ ಉಟ್ಟೂರು, ತಾಯಪ್ಪ ಗಧಾರ, ಎನ್.ಕೆ. ಕೃಷ್ಣ, ಶ್ರೀನಿವಾಸ ಕಲವಲದೊಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



