ರಾಯಚೂರು: ಮುಂಬರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡೆ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯರಾಜೇಶ್ವರಿ ಗೋಪಿಶೆಟ್ಟಿ ಅವರು ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಅವರ ಪರ ಮತಯಾಚನೆ ನಡೆಸಿದರು.

ಶಿಕ್ಷಕರನ್ನು ಭೇಟಿಯಾಗಿ ಮಾತನಾಡಿದ ಅವರು, ಶಶಿಲ್ ನಮೋಶಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಹಿರಿಯ ಮುಖಂಡರಾಗಿದ್ದು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಶಿಕ್ಷಕರ ಹಕ್ಕುಗಳ ರಕ್ಷಣೆ ಹಾಗೂ ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಗೆ ನಮೋಶಿ ಅವರು ತಮ್ಮ ಸೇವಾವಧಿಯಲ್ಲಿ ಆದ್ಯತೆ ನೀಡಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅನುಭವ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರ ಸೇವಾ ಭದ್ರತೆ, ವೃತ್ತಿಪರ ಗೌರವ, ಶೈಕ್ಷಣಿಕ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವಂತಹ ಪ್ರತಿನಿಧಿತ್ವ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ವಿಜಯರಾಜೇಶ್ವರಿ ಗೋಪಿಶೆಟ್ಟಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಬಂಡೇಶ್ ವಲ್ಕಂದಿನ್ನಿ, ವಿಷ್ಣುವರ್ಧನ್ ರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.