ರಾಯಚೂರು: ದಾಸ ಸಾಹಿತ್ಯದ ಎರಡನೇ ಘಟ್ಟದ ಪರಂಪರೆಯು ಅಪರೋಕ್ಷ ಜ್ಞಾನಿಗಳಾದ ಶ್ರೀ ವಿಜಯದಾಸರಿಂದ ಆರಂಭವಾಗಿದ್ದು, ಈ ಪರಂಪರೆಯಲ್ಲಿ ಶ್ರೀ ಪ್ರಾಣೇಶ ದಾಸರು ಅತ್ಯಂತ ಪ್ರಸಿದ್ಧ ಹರಿದಾಸರಾಗಿ ಗುರುತಿಸಿಕೊಂಡಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಹೇಳಿದರು.

ನಗರದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶ್ರೀ ಪ್ರಾಣೇಶ ದಾಸರ 245ನೇ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಹರಿದಾಸ ಪರಂಪರೆಯ ಬೆಳವಣಿಗೆಗೆ ಪ್ರಾಣೇಶ ದಾಸರು ನೀಡಿದ ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

1785ರಿಂದ 1860ರವರೆಗೆ ಜೀವಿಸಿದ್ದ ಶ್ರೀ ಪ್ರಾಣೇಶ ದಾಸರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಜನಿಸಿದರು. ದಾಸಶ್ರೇಷ್ಠ ಶ್ರೀ ಜಗನ್ನಾಥದಾಸರ ಅನುಗ್ರಹ ಪಡೆದು ‘ಪ್ರಾಣೇಶ ವಿಠಲ’ ಅಂಕಿತದೊಂದಿಗೆ ಹಲವಾರು ಸಂಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಹಾಗೂ ಬಯಲಾಟಗಳನ್ನು ರಚಿಸುವ ಮೂಲಕ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ವಿವರಿಸಿದರು.

ಅವರು ರಚಿಸಿದ ಬಿಂಬ ಧ್ಯಾನ ಸುಳಾದಿ, ಪಂಚಭೇದ, ತಂತ್ರಸಾರೋಕ್ತ ಕೇಶವಾದಿ, ಬುಡ್ಡಿ ಬ್ರಹ್ಮನ ಕಥೆ, ಪ್ರಹ್ಲಾದ ಚರಿತೆ ಹಾಗೂ ಗೋಪಿಕಾ ವಿಲಾಸ ಸೇರಿದಂತೆ ಅನೇಕ ಕೃತಿಗಳು ದಾಸ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆದಿವೆ. ಅವರ ರಚನೆಗಳಲ್ಲಿ ಭಕ್ತಿ, ತತ್ತ್ವಜ್ಞಾನ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಪ್ರತಿಫಲಿಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರು, ಮುರಳಿಧರ ಕುಲಕರ್ಣಿ ಅವರ ನೇತೃತ್ವದಲ್ಲಿ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ವಿವಿಧ ಹರಿದಾಸರ ಆರಾಧನಾ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ದಾಸ ಸಾಹಿತ್ಯದ ಪ್ರಸಾರಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಯುವಪೀಳಿಗೆಗೆ ಹರಿದಾಸರ ಜೀವನ ಮತ್ತು ಸಾಹಿತ್ಯದ ಪರಿಚಯ ಮಾಡಿಕೊಡಲು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಬ್ರಾಹ್ಮಣ ಸಮಾಜದ ಮುಖಂಡ ಹನುಮೇಶ್ ಸರಾಫ್ ಹಾಗೂ ಹರಿದಾಸ ಬೌದ್ಧಿಕ ಮಂಟಪದ ಅಧ್ಯಕ್ಷ ಸುರೇಶ್ ಕುಲಕರ್ಣಿ ಉದ್ಘಾಟಿಸಿ ಶುಭ ಹಾರೈಸಿದರು. ಅರ್ಚಕ ಶ್ರೀಧರಾಚಾರ್ಯ ಮುಂಗಲಿ ಅವರು ಶ್ರೀ ಪ್ರಾಣೇಶ ದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಆರಾಧನಾ ಮಹೋತ್ಸವದ ಅಂಗವಾಗಿ ರಾಕೇಶ್ ಕುಲಕರ್ಣಿ, ವಾಸುಕಿ ಕರಣಂ ಹಾಗೂ ಅದಿತಿ ಕರಣಂ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ಹರಿದಾಸರ ಕೀರ್ತನೆಗಳು ಭಕ್ತರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ವೆಂಕಟರಾವ್ ಕುಲಕರ್ಣಿ, ಬ್ರಾಹ್ಮಣ ಸಮಾಜದ ಮುಖಂಡ ಪ್ರಸನ್ನ ಅಲಂಪಲ್ಲಿ, ರಾಘವೇಂದ್ರ ಜಾಗೀದಾರ, ಪ್ರವೀಣ್ ಕುಮಾರ್, ಪ್ರಾಣೇಶ ಶೆಟ್ಟಿ, ಪ್ರಕಾಶ್ ಹುಣಸಿಗಿ, ಶಿಕ್ಷಕಿಯರಾದ ಕೃಷ್ಣವೇಣಿ, ಕೆ. ನಾಗರತ್ನ ಸೇರಿದಂತೆ ವಿವಿಧ ಭಜನಾ ಮಂಡಳಿಗಳ ಸದಸ್ಯರು ಹಾಗೂ ದಾಸ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.