ರಾಯಚೂರು: ತಾಲೂಕಿನ ಮಮದಾಪುರ ಗ್ರಾಮದ ಶ್ರೀ ಗಧಾರ ಮಾರಿಕಾಂಭಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.

ದೇವಸ್ಥಾನದ ಅಧ್ಯಕ್ಷ ಸವಾರೆಪ್ಪ ಪೂಜಾರಿ ಹಾಗೂ ಸೇವಾ ಸಮಿತಿಯ ನೇತೃತ್ವದಲ್ಲಿ ನಡೆದ ಮಹೋತ್ಸವದ ದುರ್ಗಾಷ್ಟಮಿ ಕಾರ್ಯಕ್ರಮದಲ್ಲಿ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ ಭಾಗವಹಿಸಿ, ಬುಡದಿನ್ನಿಯ ರಾಮರಾವ್ ತಾತನವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಗಧಾರ ಮಾರಿಕಾಂಭಾ ದೇವಿಯ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.

ಬಳಿಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಸನಗೌಡ ದದ್ದಲ, ಶರನ್ನವರಾತ್ರಿ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಯಲ್ಲ, ಮನುಷ್ಯನಲ್ಲಿರುವ ದುಶ್ಚಟಗಳು ಹಾಗೂ ದುರ್ಗುಣಗಳನ್ನು ತೊರೆದು ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುವ ಪವಿತ್ರ ಸಂದರ್ಭವಾಗಿದೆ. ನಾಡಿನಾದ್ಯಂತ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿಯೂ ನವರಾತ್ರಿ ಹಬ್ಬವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಮಮದಾಪುರ ಗ್ರಾಮದಲ್ಲಿ ಶ್ರೀ ಗಧಾರ ಮಾರಿಕಾಂಭಾ ದೇವಸ್ಥಾನದ ಅಭಿವೃದ್ಧಿಗೆ ಸವಾರೆಪ್ಪ ಪೂಜಾರಿ ಹಾಗೂ ದೇವಸ್ಥಾನದ ಸೇವಾ ಸಮಿತಿಯ ನಿರಂತರ ಪರಿಶ್ರಮ ಕಾರಣವಾಗಿದೆ. ವಿಶೇಷವಾಗಿ ಯುವಕರನ್ನು ದೇವಿಯ ಮಾಲಾಧಾರಿಗಳನ್ನಾಗಿ ಮಾಡಿ ದುಶ್ಚಟಗಳಿಂದ ದೂರವಿರಿಸಿ ಉತ್ತಮ ಜೀವನದತ್ತ ಕೊಂಡೊಯ್ಯುತ್ತಿರುವ ಸವಾರೆಪ್ಪ ಪೂಜಾರಿಯವರ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತವು ವಿವಿಧ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸಂಗಮವಾಗಿದ್ದು, ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಸೇರಿದಂತೆ ಎಲ್ಲ ಧರ್ಮಗಳ ಜನರು ಸಹೋದರತ್ವ ಹಾಗೂ ಸೌಹಾರ್ದತೆಯಿಂದ ಬದುಕುತ್ತಿರುವುದು ದೇಶದ ವೈಶಿಷ್ಟ್ಯವಾಗಿದೆ. ಇಂತಹ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸನ್ನಿ ರೊನಾಲ್ಡ್ ಮಾತನಾಡಿ, ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯನ್ನು ಪೂಜಿಸಿದರೆ ಮಾತ್ರ ಸಾಲದು. ಪ್ರತಿದಿನವೂ ಮಹಿಳೆಯರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ಗೌರವ ನೀಡುವುದೇ ನಿಜವಾದ ದೇವಿಯ ಆರಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅಧಿಕಾರ ಎಂಬುದು ಶಾಶ್ವತವಲ್ಲ. ಇಂದು ಇರುವ ಅಧಿಕಾರ ನಾಳೆ ಇಲ್ಲದಿರಬಹುದು. ಆದರೆ ಜನರಿಗೆ ಸಲ್ಲಿಸುವ ಸೇವೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ತಾವು ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ, ಮಮದಾಪುರ ಗ್ರಾಮದ ಮನೆಮಗನಾಗಿ ಜನರ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಿ, ಭಾವಚಿತ್ರ ನೀಡಿ ಗೌರವಿಸಲಾಯಿತು. ಬಳಿಕ ಮಕ್ಕಳು ಪ್ರದರ್ಶಿಸಿದ ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಭಕ್ತರು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಚನ್ನಬಸವ ನಾಯಕ, ನಾಗೇಂದ್ರಪ್ಪ ಮಟಮಾರಿ, ಕೆ. ಈರಣ್ಣ, ಶಿವಪ್ಪ ನಾಯಕ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು, ದೇವಸ್ಥಾನದ ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಮಹಿಳೆಯರು, ಯುವಕ-ಯುವತಿಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.