ರಾಯಚೂರು, ಅ.19: ಆಧುನಿಕತೆಯ ಪ್ರಭಾವದಿಂದ ಮರೆಯಾಗುತ್ತಿರುವ ನಾಡಿನ ದೇಸಿ ಕಲೆಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ವಿಶೇಷವಾಗಿ ಯುವಜನರಲ್ಲಿ ದೇಸಿ ಕಲೆಗಳ ಬಗ್ಗೆ ಆಸಕ್ತಿ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದು ಹೋರಾಟಗಾರ ಹಾಗೂ ಸಮಾಜ ಸೇವಕ ಡಾ. ಬಸವರಾಜ ಕಳಸ ಅಭಿಪ್ರಾಯಪಟ್ಟರು.
ನಗರದ ಮನರಂಜನಾ ಕೇಂದ್ರದಲ್ಲಿ ಭಾನುವಾರ ಸಂಜೆ ಮೇಘ ಕಲಾ ನಿಕೇತನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ದಸರಾ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭರತನಾಟ್ಯ, ಕುಚಿಪುಡಿ, ತೊಗಲುಗೊಂಬೆಯಾಟ, ಜಾನಪದ ನೃತ್ಯ, ಜಾನಪದ ಗೀತೆಗಳು, ಭಾವಗೀತೆಗಳು, ಯಕ್ಷಗಾನ ಹಾಗೂ ಬಯಲಾಟದಂತಹ ಕಲೆಗಳು ನಮ್ಮ ನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿವೆ. ಇಂತಹ ಕಲೆಗಳು ಆಧುನಿಕ ಜೀವನಶೈಲಿಯ ಪ್ರಭಾವದಿಂದ ಕ್ರಮೇಣ ಜನರಿಂದ ದೂರವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇವುಗಳನ್ನು ಉಳಿಸಿ ಬೆಳೆಸಲು ಸಾಂಸ್ಕೃತಿಕ ಸಂಘಟನೆಗಳು ಮುಂದಾಗಬೇಕು. ಮೇಘ ಕಲಾ ನಿಕೇತನ ಸಂಸ್ಥೆಯು ದಸರಾ ಸಂಭ್ರಮದ ಮೂಲಕ ಕಲಾವಿದರಿಗೆ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಶಾಮಣ್ಣ ಮಾಚನೂರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಘ ಕಲಾ ನಿಕೇತನ ಸಂಸ್ಥೆಯ ಉಪಾಧ್ಯಕ್ಷೆ ಮೇಘ ಅವರು ಸಂಸ್ಥೆಯ ಬೆಳವಣಿಗೆ, ಚಟುವಟಿಕೆಗಳು ಹಾಗೂ ಮುಂದಿನ ಗುರಿಗಳ ಕುರಿತು ವಿವರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೆಂಕಟೇಶ್ ಆಲ್ಕೋಡ್ ಹಾಗೂ ಸೇತುಮಾಧವ ಸಂಗೀತ ಸಹಕಾರ ನೀಡಿದರು. ಗಾಯಕರಾದ ಮೇಘ, ಜಾನ್ಸಿರಾಣಿ, ಶ್ರೀಗೌರಿ ಪಲ್ಲಕ್ಕಿ, ರಾಜಶೇಖರ್, ಚಿರಂಜೀವಿ ಯಾದವ್, ವಾಸುಕಿ, ಕರುಣಮ್, ಶೈಲಜಾ, ಸಂಗೀತ ಹಾಗೂ ಶಾಂತಪ್ಪ ಅವರು ವಿವಿಧ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಶ್ರೀಗೌರಿ ಪಲ್ಲಕ್ಕಿ ಅವರ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಭಾರತೀ ಮಸ್ಕಿ ಹಾಗೂ ತುಳಸಿ ಯಾದವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 17 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷ ಪೆಪ್ಸಿ ಗೋವಿಂದ, ಕಾಂಗ್ರೆಸ್ ಮುಖಂಡ ಸತ್ಯನಾಥ, ಉದ್ಯಮಿ ವೀರೇಂದ್ರ ಪಾಟೀಲ್ ಹರವಿ, ಬಿಜೆಪಿ ಮುಖಂಡ ಕರಿಯಪ್ಪ ನಾಯಕ, ಎಂ. ನರೇಂದ್ರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಆರಂಭದಲ್ಲಿ ಮಾರುತಿ ಬಡಿಗೇರ್ ಸ್ವಾಗತಿಸಿದರು. ಕಲಾವಿದರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಸರಾ ಸಂಭ್ರಮಕ್ಕೆ ಸಾಕ್ಷಿಯಾದರು.



