ರಾಯಚೂರು, ಅ.19: ಭಿಕ್ಷಾಟನೆಯಲ್ಲಿ ತೊಡಗಿರುವ ನಿರ್ಗತಿಕರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು ಸರ್ಕಾರದ ಜತೆಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಓಂ ಸಾಯಿ ಧ್ಯಾನ ಮಂದಿರದ ಸಂಸ್ಥಾಪಕ ಧರ್ಮಾಧಿಕಾರಿ ಸಾಯಿ ಕಿರಣ್ ಆದೋನಿ ಹೇಳಿದರು.

ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ಕರ್ನಾಟಕ ಸರ್ಕಾರದ ಆದೇಶದನ್ವಯ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭಿಕ್ಷಾಟನೆ ನಿಷೇಧ ಹಾಗೂ ಪುನರ್ವಸತಿ ಜಾಗೃತಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಭಿಕ್ಷಾಟನೆ ಸಮಸ್ಯೆಯನ್ನು ನಿವಾರಿಸಲು ಕೇವಲ ಕಾನೂನು ಕ್ರಮಗಳಿಂದ ಸಾಧ್ಯವಿಲ್ಲ. ನಿರ್ಗತಿಕರಿಗೆ ಮಾನವೀಯ ನೆಲೆಯಲ್ಲಿ ನೆರವು ನೀಡುವುದರ ಜತೆಗೆ ಅವರಿಗೆ ಸೂಕ್ತ ಪುನರ್ವಸತಿ, ಉದ್ಯೋಗಾವಕಾಶ ಹಾಗೂ ಸ್ವಾವಲಂಬಿ ಬದುಕಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರದ ಯೋಜನೆಗಳ ಕುರಿತು ಅರಿವು ಹೊಂದಿ ಸಹಕಾರ ನೀಡಬೇಕು ಎಂದು ತಿಳಿಸಿದರು.

ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಗೌರವಯುತ ಪುನರ್ವಸತಿ ಕಲ್ಪಿಸುವುದು, ಕೌಶಲ್ಯ ತರಬೇತಿ ನೀಡುವುದು, ಜೀವನೋಪಾಯಕ್ಕೆ ನೆರವು ಒದಗಿಸುವುದು ಹಾಗೂ ಆಪ್ತಸಮಾಲೋಚನೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿರಾಶ್ರಿತರ ಕೇಂದ್ರದ ವಾರ್ಡನ್ ಆದೇಶ್ ಅವರು ಭಿಕ್ಷಾಟನೆ ತಡೆಗಟ್ಟುವಿಕೆ ಹಾಗೂ ನಿರ್ಗತಿಕರ ಪುನರ್ವಸತಿ ಕುರಿತು ಜಾಗೃತಿ ಮೂಡಿಸಿದರು. ಬಳಿಕ ಸಾಯಿ ಕಿರಣ್ ಆದೋನಿ ಅವರ ಸಾನ್ನಿಧ್ಯದಲ್ಲಿ ಭಿಕ್ಷಾಟನೆ ನಿಷೇಧ ಮತ್ತು ಪುನರ್ವಸತಿ ಕುರಿತ ಜಾಗೃತಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಸಾರ್ವಜನಿಕರು ಎಲ್ಲಿಯಾದರೂ ಭಿಕ್ಷಾಟನೆಯಲ್ಲಿ ತೊಡಗಿರುವ ನಿರ್ಗತಿಕರು ಅಥವಾ ನಿರಾಶ್ರಿತರನ್ನು ಕಂಡಲ್ಲಿ ಸಂಬಂಧಪಟ್ಟ ಇಲಾಖೆಯ ಟೋಲ್‌ಫ್ರೀ ಸಂಖ್ಯೆ 10581 ಅಥವಾ ಸಹಾಯವಾಣಿ ಸಂಖ್ಯೆ 94823 00400ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಯಿತು.

ಓಂ ಸಾಯಿ ಧ್ಯಾನ ಮಂದಿರವು ಆಧ್ಯಾತ್ಮಿಕ ಚಟುವಟಿಕೆಗಳೊಂದಿಗೆ ಅನ್ನದಾನ, ಮಾನವೀಯ ಸೇವೆ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಇರ್ಷಾದ್ ಮಿಯಾ, ಜಮ್ಲಪ್ಪ, ವೀರೇಶ್, ತಾಯಿರಾಜ್, ರಜಿಯಾ ಬೇಗಂ, ಲಕ್ಷ್ಮಿ ಸೇರಿದಂತೆ ಸಾಯಿ ಭಕ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.