ರಾಯಚೂರು: ಜಿಲ್ಲೆಯಲ್ಲಿ ಅಧಿಕೃತ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ನಿರಂತರ ದಾಳಿ ನಡೆಸಿ ಎಫ್ಐಆರ್ ದಾಖಲಿಸುತ್ತಿದೆ. ಆದರೆ ಕೆಲವು ಔಷಧಿ ಅಂಗಡಿಗಳ ಮಾಲೀಕರು ನಕಲಿ ವೈದ್ಯರಿಗೆ ತಮ್ಮ ಅಂಗಡಿಗಳ ಒಳಭಾಗ ಹಾಗೂ ಹಿಂಭಾಗದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಡುತ್ತಿರುವುದು ದಾಳಿಯ ವೇಳೆ ಬೆಳಕಿಗೆ ಬಂದಿದ್ದು, ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ತಿಳಿಸಿದ್ದಾರೆ.
ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ನಕಲಿ ವೈದ್ಯರ ವಿರುದ್ಧ ನಡೆಸಿದ ದಾಳಿಯ ಸಂದರ್ಭದಲ್ಲಿ ಸ್ಥಳೀಯ ಲಕ್ಷ್ಮೀ ಮೆಡಿಕಲ್ ಶಾಪ್ನ ಒಳಭಾಗದಲ್ಲಿ ಕ್ಲಿನಿಕ್ ನಡೆಸುತ್ತಿರುವುದು ಪತ್ತೆಯಾಗಿದೆ. ಸಂಬಂಧಪಟ್ಟ ವ್ಯಕ್ತಿಯ ವೈದ್ಯಕೀಯ ದಾಖಲಾತಿಗಳನ್ನು ಪರಿಶೀಲಿಸಿದಾಗ ಯಾವುದೇ ಅಧಿಕೃತ ವೈದ್ಯಕೀಯ ಪದವಿ ಹೊಂದಿಲ್ಲದಿರುವುದು ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರಿಗೆ ಅರ್ಹ ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯಮಾನುಸಾರ ಮಾರಾಟ ಮಾಡಬೇಕಾದ ಔಷಧಿ ಅಂಗಡಿಗಳಲ್ಲಿಯೇ ಅನಧಿಕೃತವಾಗಿ ಕ್ಲಿನಿಕ್ಗಳನ್ನು ನಡೆಸುತ್ತಿರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಗಂಭೀರ ವಿಷಯವಾಗಿದೆ. ವೈದ್ಯಕೀಯ ವಿದ್ಯಾರ್ಹತೆ ಇಲ್ಲದ ವ್ಯಕ್ತಿಗಳು ರೋಗಿಗಳಿಗೆ ಚಿಕಿತ್ಸೆ ನೀಡುವುದರಿಂದ ತಪ್ಪು ರೋಗನಿರ್ಣಯ, ಸೂಕ್ತವಲ್ಲದ ಔಷಧಿಗಳ ಬಳಕೆ ಹಾಗೂ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
ಕೆಲವು ಔಷಧಿ ಅಂಗಡಿಗಳ ಪರವಾನಗಿದಾರರು ತಮ್ಮ ಅಂಗಡಿಗಳನ್ನು ಅನಧಿಕೃತವಾಗಿ ಬೇರೆಯವರಿಗೆ ನಡೆಸಲು ಅವಕಾಶ ನೀಡುತ್ತಿರುವುದು ಕಂಡುಬರುತ್ತಿದೆ. ಇಂತಹ ಸಂದರ್ಭಗಳಲ್ಲಿ ಔಷಧಿ ಅಂಗಡಿ ನಡೆಸುವವರೇ ವೈದ್ಯಕೀಯ ಅರ್ಹತೆ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪ್ರಕರಣಗಳು ಗಮನಕ್ಕೆ ಬರುತ್ತಿವೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ವಿವಿಧೆಡೆ ಔಷಧಿ ಅಂಗಡಿಗಳಲ್ಲಿ ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಆದ್ದರಿಂದ ಔಷಧಿ ಅಂಗಡಿಗಳಿಗೆ ಪರವಾನಗಿ ನೀಡುವ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ಖುದ್ದು ಪರಿಶೀಲನೆ ನಡೆಸಬೇಕು. ಪರವಾನಗಿ ನಿಯಮಗಳ ಉಲ್ಲಂಘನೆ ಹಾಗೂ ಅನಧಿಕೃತ ವೈದ್ಯಕೀಯ ಚಟುವಟಿಕೆಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಾ. ನಂದಿತಾ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಕೈಗೊಂಡಿರುವ ಕಾರ್ಯಾಚರಣೆಯೊಂದಿಗೆ ಔಷಧ ನಿಯಂತ್ರಣ ಇಲಾಖೆಯೂ ಸಮನ್ವಯ ಸಾಧಿಸುವುದು ಅಗತ್ಯವಾಗಿದೆ. ಸಾರ್ವಜನಿಕರು ಸಹ ಚಿಕಿತ್ಸೆ ಪಡೆಯುವ ಮೊದಲು ವೈದ್ಯರ ಅಧಿಕೃತ ವಿದ್ಯಾರ್ಹತೆ ಹಾಗೂ ನೋಂದಣಿ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಗಣೇಶ್ ಕೆ., ತಾಲೂಕು ಆರೋಗ್ಯಾಧಿಕಾರಿ ಡಾ. ಶರಣಬಸವರಾಜ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



