ರಾಯಚೂರು: ಸಾಹಿತ್ಯವು ಸಮಾಜದ ಪರಿವರ್ತನೆಗೆ ಪ್ರಬಲ ಮಾಧ್ಯಮವಾಗಿದ್ದು, ಕವಿಗಳು ತಮ್ಮ ಕಾವ್ಯ ರಚನೆಗಳ ಮೂಲಕ ಜನರಲ್ಲಿ ಪ್ರಕೃತಿ ಪ್ರೇಮ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬೀನ್ ಮೊಹಾಪಾತ್ರ ಅಭಿಪ್ರಾಯಪಟ್ಟರು.

ನಗರದ ಮಕ್ಕಾ ದರವಾಜಾ ಸಮೀಪ ರಾಯಚೂರು ಮಹಾನಗರ ಪಾಲಿಕೆ ವತಿಯಿಂದ ನಾಡಹಬ್ಬ ದಸರಾ-2026ರ ಪ್ರಯುಕ್ತ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಯಚೂರು ಜಿಲ್ಲೆ ತನ್ನದೇ ಆದ ಐತಿಹಾಸಿಕ ಹಿರಿಮೆ, ವೈವಿಧ್ಯಮಯ ಸಂಸ್ಕೃತಿ ಹಾಗೂ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಇಲ್ಲಿನ ಕವಿ, ಸಾಹಿತಿಗಳಲ್ಲಿ ಅಪಾರ ಪ್ರತಿಭೆಯಿದ್ದು, ಅವರ ಸೃಜನಶೀಲತೆಗೆ ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯವಿದೆ. ಸಾಹಿತ್ಯ ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು. ವಿಶೇಷವಾಗಿ ನಾಡು, ನುಡಿ, ನೆಲ, ಜಲ, ಅರಣ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಕವನಗಳ ಮೂಲಕ ಜನಮನಕ್ಕೆ ತಲುಪಿಸಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವಿಜಯ್ ರಾಜೇಂದ್ರ ಮಾತನಾಡಿ, ಮಹಾನಗರ ಪಾಲಿಕೆ ಆಯೋಜಿಸುತ್ತಿರುವ ಬಹುಭಾಷಾ ಕವಿಗೋಷ್ಠಿಯ ವ್ಯಾಪ್ತಿಯನ್ನು ಮುಂದಿನ ವರ್ಷಗಳಲ್ಲಿ ಜಿಲ್ಲಾಮಟ್ಟಕ್ಕೆ ವಿಸ್ತರಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳ ಉದಯೋನ್ಮುಖ ಕವಿಗಳು, ಹಿರಿಯ ಸಾಹಿತಿಗಳು ಹಾಗೂ ಯುವ ಬರಹಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಒದಗಿಸಬೇಕು ಎಂದು ಸಲಹೆ ನೀಡಿದರು.

ರಾಯಚೂರು ಜಿಲ್ಲೆಯಲ್ಲಿ ಕನ್ನಡದೊಂದಿಗೆ ತೆಲುಗು, ಉರ್ದು, ಹಿಂದಿ ಸೇರಿದಂತೆ ಹಲವು ಭಾಷೆಗಳು ಬಳಕೆಯಲ್ಲಿವೆ. ವಿವಿಧ ಭಾಷೆಗಳ ಕವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ. ಕವಿಗೋಷ್ಠಿಯಲ್ಲಿ ವಾಚಿಸಲಾದ ಕವನಗಳನ್ನು ಸಂಕಲಿಸಿ ಸ್ಮರಣ ಸಂಚಿಕೆ ಹೊರತರಬೇಕು. ಭಾಗವಹಿಸುವ ಸಾಹಿತಿಗಳಿಗೆ ಸೂಕ್ತ ಗೌರವಧನ ನೀಡುವ ವ್ಯವಸ್ಥೆಯನ್ನೂ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತ ಸಿದ್ದಯ್ಯಸ್ವಾಮಿ ಮಾತನಾಡಿ, ಕವಿಗಳ ಸಾಹಿತ್ಯವನ್ನು ಓದುಗರಿಗೆ ತಲುಪಿಸುವಲ್ಲಿ ಪತ್ರಿಕೆಗಳು ಹಾಗೂ ಇತರ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೋವಿಡ್ ನಂತರ ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಮೀಸಲಾದ ಪುರವಣಿಗಳ ಅವಕಾಶ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕವಿಗಳು ಆಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕವನ, ಲೇಖನ ಹಾಗೂ ಸಾಹಿತ್ಯ ಕೃತಿಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ಮುಂದಾಗಬೇಕು ಎಂದು ತಿಳಿಸಿದರು.

ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಕವಿಗಳು ಹಸಿರು ಪರಿಸರ, ಪ್ರಕೃತಿಯ ಸೊಬಗು, ನದಿ-ತೊರೆಗಳು, ಬೆಟ್ಟಗುಡ್ಡಗಳು, ಕೃಷಿ ಬದುಕು ಹಾಗೂ ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಪ್ರತಿಬಿಂಬಿಸುವ ಕವನಗಳನ್ನು ವಾಚಿಸಿ ಸಾಹಿತ್ಯಾಸಕ್ತರ ಗಮನ ಸೆಳೆದರು. ವಿವಿಧ ಭಾಷೆಗಳ ಕಾವ್ಯ ವಾಚನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಈ ಸಂದರ್ಭದಲ್ಲಿ ಅಂಜಿನಯ್ಯ ಜಾಲಿಬೆಂಚಿ, ವೆಂಕಟರಾವ್ ಕುಲಕರ್ಣಿ, ಸಿದ್ದಯ್ಯಸ್ವಾಮಿ, ರಘುನಾಥ ರೆಡ್ಡಿ ಮಂಚಾಲಪುರ, ಮುರಳೀಧರ ಕುಲಕರ್ಣಿ ಸೇರಿದಂತೆ ಹಲವು ಕವಿಗಳು, ಸಾಹಿತಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.