ರಾಯಚೂರು: ಸಂಗೀತವು ಮನುಷ್ಯನ ಮನಸ್ಸಿಗೆ ಸಂತೋಷ ಮತ್ತು ನೆಮ್ಮದಿ ನೀಡುವುದರೊಂದಿಗೆ ದಿನನಿತ್ಯದ ಬದುಕಿನ ಒತ್ತಡಗಳನ್ನು ದೂರ ಮಾಡುವ ಅದ್ಭುತ ಶಕ್ತಿಯನ್ನು ಹೊಂದಿದೆ ಎಂದು ಸಾಹಿತಿ ತಾಯಪ್ಪ ಮರ್ಚಟಹಾಳ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ವೃತ್ತದ ಸಮೀಪವಿರುವ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ವಿ. ರಿಷಿತಾ ಅರ್ಪಣೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ಸರ್ಕಾರಿ ನೌಕರರ 'ಗಾನಲಹರಿ' ಕರೋಕೆ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರು ತಮ್ಮ ವೃತ್ತಿಯ ಜವಾಬ್ದಾರಿ ಹಾಗೂ ಕೆಲಸದ ಒತ್ತಡದ ನಡುವೆಯೂ ತಮ್ಮಲ್ಲಿರುವ ಕಲಾಸಕ್ತಿಯನ್ನು ಜೀವಂತವಾಗಿಟ್ಟುಕೊಳ್ಳಬೇಕು. ಸಂಗೀತ, ಸಾಹಿತ್ಯ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಉಲ್ಲಾಸ ದೊರೆಯುವುದರ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮಗಳು ನೌಕರರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಉತ್ತಮ ವೇದಿಕೆಯಾಗಿವೆ ಎಂದು ಹೇಳಿದರು.
ಮೊದಲ ಬಾರಿಗೆ ವೇದಿಕೆಯಲ್ಲಿ ಹಾಡಿದ ಗಾಯಕರಿಗೆ ಸಲಹೆ ನೀಡಿದ ಅವರು, ಸಂಗೀತ ಕಲಿಯುವವರು ಆತ್ಮವಿಶ್ವಾಸದಿಂದ ಹಾಡುವುದನ್ನು ರೂಢಿಸಿಕೊಳ್ಳಬೇಕು. ಆರಂಭದಲ್ಲಿ ಸಣ್ಣಪುಟ್ಟ ತಪ್ಪುಗಳಾದರೂ ನಿರಾಶರಾಗದೆ ನಿರಂತರ ಅಭ್ಯಾಸದಲ್ಲಿ ತೊಡಗಬೇಕು. ಹಾಡಿನ ಸಾಹಿತ್ಯ, ಅದರ ಅರ್ಥ, ಭಾವನೆ ಹಾಗೂ ರಾಗದ ಲಯವನ್ನು ಅರ್ಥೈಸಿಕೊಂಡು ಹಾಡಿದಾಗ ಗಾಯನ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇತರ ಕಲಾವಿದರ ಗಾಯನವನ್ನು ಆಲಿಸುವುದರೊಂದಿಗೆ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಶಂಸೆ ದೊರೆತಾಗ ಅತಿಯಾದ ಹೆಮ್ಮೆ ಪಡದೆ, ಟೀಕೆಗಳು ಎದುರಾದಾಗ ಧೃತಿಗೆಡದೆ ಕಲೆಯ ಮೇಲಿನ ಆಸಕ್ತಿಯನ್ನು ಮುಂದುವರಿಸಬೇಕು. ಸಂಗೀತವನ್ನು ಕೇವಲ ಮನರಂಜನೆಯ ಸಾಧನವಾಗಿ ಪರಿಗಣಿಸದೆ ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ರೂವಾರಿ ಯಂಕಪ್ಪ ಪಿರಂಗಿ ಮಾತನಾಡಿ, ಸರ್ಕಾರಿ ನೌಕರರಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಈ ಸಂಗೀತ ಸಂಜೆಯನ್ನು ಆಯೋಜಿಸಲಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನೌಕರರ ನಡುವೆ ಸ್ನೇಹ, ಪರಸ್ಪರ ವಿಶ್ವಾಸ ಹಾಗೂ ಸೌಹಾರ್ದ ಸಂಬಂಧಗಳನ್ನು ಬೆಳೆಸುತ್ತವೆ. ಮುಂದಿನ ದಿನಗಳಲ್ಲಿಯೂ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮತ್ತೋರ್ವ ಅತಿಥಿ ನಂದೀಶ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಬೆಳಕಿಗೆ ತರಲು ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ಅಗತ್ಯವಾಗಿದೆ. ಸರ್ಕಾರಿ ನೌಕರರ ಬಿಡುವಿಲ್ಲದ ಕೆಲಸದ ನಡುವೆ ಆಯೋಜಿಸಿರುವ 'ಒಲಿದಂತೆ ಹಾಡುವೆ' ಸಂಗೀತ ಕಾರ್ಯಕ್ರಮವು ಅವರಲ್ಲಿನ ಗಾಯನಾಸಕ್ತಿಗೆ ವೇದಿಕೆ ಕಲ್ಪಿಸಿದೆ. ಇಂತಹ ಪ್ರಯತ್ನಗಳು ಇನ್ನಷ್ಟು ವಿಸ್ತಾರಗೊಳ್ಳಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಕರೋಕೆ ಸಂಗೀತದೊಂದಿಗೆ ವಿವಿಧ ಗೀತೆಗಳನ್ನು ಹಾಡುವ ಮೂಲಕ ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದರು. ಸಂಗೀತ ಸಂಜೆ ನೌಕರರ ಸಾಂಸ್ಕೃತಿಕ ಆಸಕ್ತಿ ಹಾಗೂ ಕಲಾಪ್ರೇಮಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಗೂಳಪ್ಪ, ಕೃಷ್ಣಪ್ಪ, ರಂಗನಾಥ, ಯಂಕಪ್ಪ ಪಿರಂಗಿ, ಜಿಂದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕ ಶಿವರಾಜ್ ಸ್ವಾಗತಿಸಿದರು. ರಾಜಶೇಖರ ಬಿ.ಎಲ್. ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.



