ರಾಯಚೂರು: ನಾಡಹಬ್ಬ ದಸರಾ ಆಯುಧ ಪೂಜೆಯ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.

ನಗರದ ಬೋಳಮಾನದೊಡ್ಡಿ ರಸ್ತೆಯ ತುಳಜಾ ಭವಾನಿ ದೇವಸ್ಥಾನದ ರಸ್ತೆಯಲ್ಲಿರುವ ಸಂಘದ ಜಿಲ್ಲಾ ಕಚೇರಿ ಆವರಣದಲ್ಲಿ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಪ್ರಭಣ್ಣಗೌಡ ಹಂಚಿನಾಳ ಅವರ ಆಶಯದಂತೆ ಸಂಘದ ಅಧ್ಯಕ್ಷ ಎಸ್. ಶಂಕರಗೌಡ ಅವರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರೀನ್ ರಾಯಚೂರು ಸಂಸ್ಥೆಯ ಮುಖ್ಯಸ್ಥ ರಾಜೇಂದ್ರ ಶಿವಾಳೆ ಮಾತನಾಡಿ, ದಸರಾ ಆಯುಧ ಪೂಜೆಯಂತಹ ಶುಭ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನೌಕರರು ಸಸಿ ನೆಡುವ ಮೂಲಕ ಪ್ರಕೃತಿಯ ಆರಾಧನೆಗೆ ಮುಂದಾಗಿರುವುದು ಮಾದರಿ ಕಾರ್ಯವಾಗಿದೆ. ಹಬ್ಬದ ಆಚರಣೆಯೊಂದಿಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆ ಹಾಗೂ ಬರಗಾಲದ ಪರಿಣಾಮ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ನೀರಿನ ಬೆಲೆಯೂ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬರೂ ನೀರಿನ ಮಿತಬಳಕೆಗೆ ಮುಂದಾಗಬೇಕು. ಇಂದಿನಿಂದಲೇ ನೀರಿನ ಸಂರಕ್ಷಣೆಗೆ ಗಮನಹರಿಸದಿದ್ದರೆ ಮುಂದಿನ ಪೀಳಿಗೆ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನೆಗಳು, ಸಾರ್ವಜನಿಕ ಸ್ಥಳಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ನೀರಿನ ಕೊಳವೆಗಳು ಸೋರಿಕೆಯಾಗುತ್ತಿದ್ದರೆ ತಕ್ಷಣ ದುರಸ್ತಿಗೊಳಿಸಬೇಕು. ಅನಗತ್ಯವಾಗಿ ನೀರು ವ್ಯರ್ಥವಾಗುವುದನ್ನು ತಡೆಗಟ್ಟುವ ಮೂಲಕ ಅಮೂಲ್ಯ ಜಲಸಂಪನ್ಮೂಲವನ್ನು ಉಳಿಸಬಹುದು. ಪರಿಸರ ಸಂರಕ್ಷಣೆ ಮತ್ತು ನೀರಿನ ಉಳಿತಾಯ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಸ್. ಶಂಕರಗೌಡ ಮಾತನಾಡಿ, ಆಯುಧ ಪೂಜೆಯ ಸಂದರ್ಭದಲ್ಲಿ ಪರಿಸರಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಸಸಿ ನೆಡುವ ಕಾರ್ಯಕ್ರಮ ಆಯೋಜಿಸುವ ಪ್ರಸ್ತಾವನೆಯನ್ನು ಪ್ರಭಣ್ಣಗೌಡ ಹಂಚಿನಾಳ ಅವರು ಮುಂದಿಟ್ಟಾಗ ಸಂತೋಷದಿಂದ ಒಪ್ಪಿಕೊಂಡೆವು. ಒಂದು ಸಸಿಯನ್ನು ನೆಟ್ಟು ಅದನ್ನು ಜವಾಬ್ದಾರಿಯಿಂದ ಪೋಷಿಸಿದರೆ ಭವಿಷ್ಯದಲ್ಲಿ ಅದು ದೊಡ್ಡ ಮರವಾಗಿ ಅನೇಕ ಜೀವಿಗಳಿಗೆ ಆಶ್ರಯ ನೀಡುತ್ತದೆ ಎಂದು ಹೇಳಿದರು.

ಮರಗಳು ಮನುಷ್ಯನಿಗೆ ನೆರಳು, ಹಣ್ಣು, ಹೂವು ಹಾಗೂ ಶುದ್ಧ ಗಾಳಿಯನ್ನು ನೀಡುವುದರೊಂದಿಗೆ ಪಕ್ಷಿ, ಪ್ರಾಣಿಗಳಿಗೂ ಆಶ್ರಯವಾಗುತ್ತವೆ. ಆದ್ದರಿಂದ ಸಸಿ ನೆಡುವುದಕ್ಕೆ ಮಾತ್ರ ಸೀಮಿತವಾಗದೆ ಅವುಗಳನ್ನು ಬೆಳೆಸಿ ಸಂರಕ್ಷಿಸುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ನಿವೃತ್ತ ನೌಕರರು ಒಗ್ಗೂಡಿ ಬಾದಾಮಿ ಸಸಿಯನ್ನು ನೆಟ್ಟು ಅದಕ್ಕೆ 'ಶಾಂಭವಿ' ಎಂದು ನಾಮಕರಣ ಮಾಡಿದರು. ಬಳಿಕ ಸಸಿಗೆ ನೀರುಣಿಸಿ ಅದರ ಸಂರಕ್ಷಣೆಗೆ ಸಂಕಲ್ಪ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಮಹಾದೇವಪ್ಪ ಏಗನೂರು, ಕಾರ್ಯದರ್ಶಿ ವಿಶ್ವನಾಥರೆಡ್ಡಿ, ಖಜಾಂಚಿ ಮಲ್ಲಯ್ಯ ಕಲ್ಲೂರು, ಸಂಘಟನಾ ಕಾರ್ಯದರ್ಶಿ ಪ್ರಭಣ್ಣಗೌಡ, ಕಾರ್ಯದರ್ಶಿ ಶಿರಾಜ್ ಅಹ್ಮದ್, ಸದಸ್ಯರಾದ ಎ. ರಾಮುಲು, ವಿಜಯಲಕ್ಷ್ಮೀ, ಹಮೀದ್ ಸಾಬ್, ಶ್ರೀನಿವಾಸರಾವ್ ಕೆ.ಎನ್., ಡೇವಿಡ್ ವಿಶ್ವನಾಥ ಕಾಲೋನಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನಿವೃತ್ತ ನೌಕರರು ಉಪಸ್ಥಿತರಿದ್ದರು.