ರಾಯಚೂರು, ಅ.20: ದುಡಿಮೆಯನ್ನೇ ಬದುಕಿನ ಆಧಾರವಾಗಿಸಿಕೊಂಡಿರುವ ಬೋವಿ ಸಮಾಜವು ತನ್ನ ಸಾಂಪ್ರದಾಯಿಕ ವೃತ್ತಿಗೆ ಬಳಸುವ ಉಪಕರಣಗಳನ್ನು ಪೂಜಿಸುವ ಮೂಲಕ ಶ್ರಮ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದೆ ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ನಗರದ ಆಶಾಪೂರ ರಸ್ತೆಯಲ್ಲಿರುವ ಶ್ರೀ ಸಿದ್ಧರಾಮೇಶ್ವರ ಮೂರ್ತಿ ವೃತ್ತದಲ್ಲಿ ಬೋವಿ ಸಮಾಜದ ವತಿಯಿಂದ ಆಯೋಜಿಸಿದ್ದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ತಲೆಮಾರುಗಳಿಂದ ಕಠಿಣ ಪರಿಶ್ರಮದ ಮೂಲಕ ಬದುಕು ಕಟ್ಟಿಕೊಂಡಿರುವ ಬೋವಿ ಸಮಾಜವು ದುಡಿಮೆಗೆ ವಿಶೇಷ ಗೌರವ ನೀಡುತ್ತಾ ಬಂದಿದೆ. ನವರಾತ್ರಿ ಉತ್ಸವದ ಅಂಗವಾಗಿ ಆಚರಿಸುವ ಆಯುಧ ಪೂಜೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ದುಡಿಮೆಯ ಸಾಧನಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ವಿಶಿಷ್ಟ ಸಂಪ್ರದಾಯವಾಗಿದೆ ಎಂದು ತಿಳಿಸಿದರು.
ಕಲ್ಲು ಒಡೆಯುವುದು ಸೇರಿದಂತೆ ಶ್ರಮದಾಯಕ ವೃತ್ತಿಗಳಲ್ಲಿ ತೊಡಗಿರುವ ಬೋವಿ ಸಮಾಜದ ಜನರು ತಮ್ಮ ಕಾಯಕಕ್ಕೆ ಬಳಸುವ ಉಪಕರಣಗಳನ್ನು ಪೂಜಿಸಿ, ವೃತ್ತಿಯಲ್ಲಿ ಯಶಸ್ಸು ಹಾಗೂ ಕುಟುಂಬದ ಏಳಿಗೆಗಾಗಿ ಪ್ರಾರ್ಥಿಸುತ್ತಾರೆ. ಇಂತಹ ಆಚರಣೆಗಳು ಶ್ರಮದ ಘನತೆಯನ್ನು ಎತ್ತಿಹಿಡಿಯುವುದರ ಜೊತೆಗೆ ಸಮಾಜದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತವೆ ಎಂದರು.
ದೇಶದ ವಿವಿಧ ಭಾಗಗಳಲ್ಲಿ ರೈತರು, ಕಾರ್ಮಿಕರು, ಕುಶಲಕರ್ಮಿಗಳು ಹಾಗೂ ವಾಹನ ಚಾಲಕರು ತಮ್ಮ ವೃತ್ತಿಗೆ ಸಂಬಂಧಿಸಿದ ಉಪಕರಣಗಳು ಮತ್ತು ವಾಹನಗಳಿಗೆ ಪೂಜೆ ಸಲ್ಲಿಸುವ ಪದ್ಧತಿ ರೂಢಿಯಲ್ಲಿದೆ. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಮಹತ್ವವಿದ್ದು, ಯಾವುದೇ ಕೆಲಸವನ್ನು ಕೀಳಾಗಿ ಕಾಣದೆ ದುಡಿಮೆಗೆ ಗೌರವ ನೀಡುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಬೋವಿ ಸಮಾಜದ ಜನರು ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕು. ಸಮಾಜದ ಯುವಜನರು ಶೈಕ್ಷಣಿಕವಾಗಿ ಮುನ್ನಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶ್ರೀ ಸಿದ್ಧರಾಮೇಶ್ವರರ ಆಶೀರ್ವಾದದಿಂದ ಸಮಾಜದ ಪ್ರತಿಯೊಂದು ಕುಟುಂಬವೂ ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಚನ್ನಬಸವ, ಬಶೀರ್, ಕಡಗೋಲ್ ಆಂಜನೇಯ, ಶಶಿಕಲಾ ಭೀಮರಾಯ, ನಾರಾಯಣ ಸ್ವಾಮಿ ಸೇರಿದಂತೆ ಬೋವಿ ಸಮಾಜದ ಮುಖಂಡರು ಹಾಗೂ ಸಮಾಜದ ಅನೇಕರು ಉಪಸ್ಥಿತರಿದ್ದರು.



