ರಾಯಚೂರು, ಅ.19: ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಆರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಮತ್ತು ಆಪ್ತಸಮಾಲೋಚನೆ ಪಡೆಯಬೇಕು. ಮಾನಸಿಕ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದ್ದು, ಸಾರ್ವಜನಿಕರು ಯಾವುದೇ ಹಿಂಜರಿಕೆಯಿಲ್ಲದೆ ಈ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಕರೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಎದುರಾಗುವ ನಿರಂತರ ಸಂಕಷ್ಟಗಳು, ಅತಿಯಾದ ಒತ್ತಡ ಹಾಗೂ ಮಿತಿಮೀರಿದ ಆಲೋಚನೆಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರು ರೋಗಿಯ ಮನಃಸ್ಥಿತಿಯನ್ನು ಅರ್ಥಮಾಡಿಕೊಂಡು ಪ್ರೀತಿ, ಸಹಕಾರ ಮತ್ತು ಸೂಕ್ತ ಚಿಕಿತ್ಸೆಯ ಮೂಲಕ ಚೇತರಿಸಿಕೊಳ್ಳಲು ನೆರವಾಗಬೇಕು ಎಂದು ತಿಳಿಸಿದರು.

ಹಿಂದಿನ ದಿನಗಳಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುವವರನ್ನು ಮನೆಯಲ್ಲಿರಿಸಿಕೊಳ್ಳುವುದು ಅಪಾಯಕಾರಿ ಎಂಬ ತಪ್ಪು ಕಲ್ಪನೆಯಿತ್ತು. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಲ್ಲಿ ಆಗಿರುವ ಸಂಶೋಧನೆಗಳು ಹಾಗೂ ಆಧುನಿಕ ಚಿಕಿತ್ಸಾ ವಿಧಾನಗಳಿಂದ ಅನೇಕ ಮಾನಸಿಕ ಕಾಯಿಲೆಗಳಿಗೆ ಮನೆಯಲ್ಲಿಯೇ ಆರೈಕೆಯೊಂದಿಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ. ಮಾನಸಿಕ ಸಮಸ್ಯೆಗಳ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಅಗತ್ಯವಾಗಿದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಶಿವಕುಮಾರ ನಾರಾ ಮಾತನಾಡಿ, ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುವವರು ಕೆಲಸದ ಒತ್ತಡದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳಬಾರದು. ಸಮಸ್ಯೆಗಳು ಎದುರಾದಾಗ ಅವುಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳದೆ ಸಹೋದ್ಯೋಗಿಗಳು, ಕುಟುಂಬದ ಸದಸ್ಯರು ಹಾಗೂ ಆಪ್ತರೊಂದಿಗೆ ಹಂಚಿಕೊಳ್ಳಬೇಕು. ಮಾನಸಿಕ ಸದೃಢತೆಗೆ ಪರಸ್ಪರ ಸಹಕಾರ ಮತ್ತು ಮುಕ್ತ ಸಂವಹನ ಅತ್ಯಂತ ಮುಖ್ಯ ಎಂದು ಹೇಳಿದರು.

ಮನೋರೋಗ ತಜ್ಞ ಡಾ. ಮನೋಹರ ಪತ್ತಾರ ಮಾತನಾಡಿ, ಈ ವರ್ಷದ 'ಅನುಭವದ ಧ್ವನಿ ಬದಲಾವಣೆಯ ಶಕ್ತಿ' ಎಂಬ ಘೋಷವಾಕ್ಯದ ಮಹತ್ವವನ್ನು ವಿವರಿಸಿದರು. ವಿಶೇಷವಾಗಿ 15ರಿಂದ 25 ವರ್ಷದ ಯುವಜನತೆಯಲ್ಲಿಯೂ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶ ಅಥವಾ ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಯಾರನ್ನಾದರೂ ಇಂತಹ ಸಮಸ್ಯೆಗಳು ಬಾಧಿಸಬಹುದು ಎಂದು ತಿಳಿಸಿದರು.

ಮಾನಸಿಕ ಕಾಯಿಲೆಗಳು ವ್ಯಕ್ತಿಯ ಆಲೋಚನೆ, ಭಾವನೆ ಹಾಗೂ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಕಾರಣವಿಲ್ಲದೆ ಅತಿಯಾದ ಕೋಪ, ದುಃಖ, ಅಳು ಅಥವಾ ನಗು ಸೇರಿದಂತೆ ಅಸಹಜ ವರ್ತನೆಯ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಬೇಕು. ಆರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದರೆ ಅನೇಕ ಮಾನಸಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಉಚಿತ ಆಪ್ತಸಮಾಲೋಚನೆ ಮತ್ತು ಔಷಧೋಪಚಾರ ಲಭ್ಯವಿದೆ. ಅಲ್ಲದೆ, 'ಮನೋಚೈತನ್ಯ' ಕಾರ್ಯಕ್ರಮದಡಿ ಪ್ರತಿ ಮಂಗಳವಾರ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಉಚಿತ ಮಾನಸಿಕ ಆರೋಗ್ಯ ತಪಾಸಣೆ ಹಾಗೂ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮಾನಸಿಕ ಆರೋಗ್ಯದ ಕುರಿತು ಸಲಹೆ, ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಟೆಲಿ-ಮನಸ್ ಉಚಿತ ಸಹಾಯವಾಣಿ ಸಂಖ್ಯೆ 14416ಕ್ಕೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಮಾನಸಿಕ ಆರೋಗ್ಯ ರಕ್ಷಣೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅಮರೇಶ್, ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸುನೀಲ್ ಹೆಚ್., ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಸೈಕಾಲಜಿಸ್ಟ್ ಅರುಣ್ ಕುಮಾರ್, ಪಿಎಸ್‌ಡಬ್ಲ್ಯು ದೀಪಾ ಎಸ್.ಎಲ್., ಪಿಎಸ್‌ಎನ್ ಗಂಗಮ್ಮ, ಪಿಎಸ್‌ಡಬ್ಲ್ಯು ಮಂಜುಳಾ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.